ಬೆಂಗಳೂರು, ಫೆ.13-ವಿವಿಧ ವೃಂದಗಳ ವಲಯದಲ್ಲಿನ ವರ್ಗಾವಣೆಗಾಗಿ ಸೇವಾವಧಿಯನ್ನು 5 ವರ್ಷಗಳಿಂದ 3 ವರ್ಷಗಳಿಗೆ ಕಡಿಮೆಗೊಳಿಸುವ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ತಿದ್ದುಪಡಿ ವಿಧೇಯಕ 2018 ಇಂದು ಅಂಗೀಕಾರವಾಯಿತು.
ಈಗಾಗಲೇ ಮಂಡನೆಯಾಗಿದ್ದ ಈ ವಿಧೇಯಕವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದಾಗ ವಿಧಾನಸಭೆಯಲ್ಲಿ ಧ್ವನಿಮತದ ಅಂಗೀಕಾರ ದೊರೆಯಿತು.
ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2007ನ್ನು ಮತ್ತಷ್ಟು ತಿದ್ದುಪಡಿ ಮಾಡಲು ಈ ವಿಧೇಯಕ ತರಲಾಗಿದೆ.
ಪದವಿ ಪೂರ್ವ ಶಿಕ್ಷಣ ಶಿಕ್ಷಕರ ವರ್ಗಾವಣೆಗೆ ಸಂಬಂಧಿಸಿದಂತೆ ನಗರ ಪಾಲಿಕೆ, ಪುರಸಭೆ ಮತ್ತು ಪಟ್ಟಣ ಪಂಚಾಯ್ತಿಗಳನ್ನು ನಗರ ಪ್ರದೇಶದ ವ್ಯಾಪ್ತಿಯೊಳಗೆ ಸೇರಿಸದಿರುವ ಉದ್ದೇಶವನ್ನು ಈ ವಿಧೇಯಕ ಒಳಗೊಂಡಿದೆ.
ಒಬ್ಬ ಶಿಕ್ಷಕ ಅಥವಾ ಆ ಶಿಕ್ಷಕರ ಪತಿ ಅಥವಾ ಪತ್ನಿ ಅಥಾವ ಮಕ್ಕಳು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದಲ್ಲಿ, ಅದಕ್ಕೆ ವೈದ್ಯಕೀಯ ಚಿಕಿತ್ಸೆ ಎಲ್ಲಿಯೂ ದೊರೆಯದಿದ್ದಲ್ಲಿ ಪತಿ, ಪತ್ನಿ ಪ್ರಕರಣಗಳ ಸಂದರ್ಭದಲ್ಲಿ ಒಂದೇ ಸ್ಥಳದಲ್ಲಿ ಸ್ಥಳ ನಿಯುಕ್ತಿಗಾಗಿ ಕಡ್ಡಾಯ ವರ್ಗಾವಣೆಯಿಂದ ವಿನಾಯಿತಿ ನೀಡುವ ಅವಕಾಶವನ್ನು ಕಲ್ಪಿಸಲಿದೆ.
ಶಿಕ್ಷಕರಿಗೆ ಆ ಶಿಕ್ಷಕರ ಪತಿ ಅಥವಾ ಪತ್ನಿ ಸರ್ಕಾರಿ ಅಥವಾ ಸಾರ್ವಜನಿಕ ವಲಯದಲ್ಲಿ ಉದ್ಯಮದಲ್ಲಿ ಕೆಲಸ ಮಾಡುತ್ತಿರುವ ಕೆಲಸಗಳಿಗೆ ವರ್ಗಾವಣೆ ಅವಕಾಶವನ್ನು ಕಲ್ಪಿಸಲು ಈ ವಿಧೇಯಕ ಅನುವು ಮಾಡಿಕೊಡಲಿದೆ.