ನವದೆಹಲಿ, ಫೆ.13- ರಾಜಧಾನಿ ದೆಹಲಿಯಲ್ಲಿ ನಿನ್ನೆ ನಸುಕಿನಲ್ಲಿ ಹೋಟೆಲ್ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 17ಮಂದಿ ಮೃತಪಟ್ಟ ದುರಂತದ ಬೆನ್ನಲ್ಲೇ ಮತ್ತೊಂದು ಅಗ್ನಿ ಆಕಸ್ಮಿಕ ಮರುಕಳಿಸಿದೆ.
ಪಶ್ಚಿಮಪುರಿ ಬಡಾವಣೆಯ ಕೊಳಗೇರಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ 200ಕ್ಕೂ ಹೆಚ್ಚು ಗುಡಿಸಲುಗಳು ಸುಟ್ಟು ಭಸ್ಮವಾಗಿವೆ.
ಈ ದುರ್ಘಟನೆಯಲ್ಲಿ ಮಹಿಳೆ ಸೇರಿದಂತೆ ಹಲವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸುದ್ದಿ ತಿಳಿದ ಕೂಡಲೇ 25ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿದ ಸಿಬ್ಬಂದಿ ಶ್ರಮವಹಿಸಿ ಬೆಂಕಿಯ ಕೆನ್ನಾಲಿಗೆಯನ್ನು ನಂದಿಸಿದರು.