ಬೆಂಗಳೂರು, ಫೆ.12- ದೇಶಾದ್ಯಂತ ಎಲ್ಲ ಕಾರ್ಯಕರ್ತರ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಮೇರಾ ಪರಿವಾರ್ ಬಿಜೆಪಿ ಪರಿವಾರ್ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು.
ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲಿ ಪಕ್ಷದ ಧ್ವಜವನ್ನು ಧ್ವಜಾರೋಹಣ ಮಾಡುವ ಮೂಲಕ ಮೇರಾ ಪರಿವಾರ್ ಬಿಜೆಪಿ ಪರಿವಾರ್ ಅಭಿಯಾನಕ್ಕೆ ಚಾಲನೆ ಕೊಟ್ಟರು.
ರಾಷ್ಟ್ರಾದ್ಯಂತ ಐದು ಕೋಟಿ ಕಾರ್ಯಕರ್ತರ ನಿವಾಸಗಳಿಗೆ ಬಿಜೆಪಿ ಲಾಂಚನದ ಸ್ಟಿಕ್ಕರ್ ಅಂಟಿಸುವ ಅಭಿಯಾನವೇ ಮೇರಾ ಪರಿವಾರ್ ಬಿಜೆಪಿ ಪರಿವಾರ್.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ , ಇಂದು ದೇಶಾದ್ಯಂತ ಎಲ್ಲ ಬಿಜೆಪಿ ಕಾರ್ಯಕರ್ತರ ಮನೆಗಳಲ್ಲಿ ಪಕ್ಷದ ಧ್ವಜ ಹಾರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ರಾಜ್ಯದ ಕನಿಷ್ಟ 70 ಲಕ್ಷ ಮನೆಗಳಲ್ಲಿ ಪಕ್ಷದ ಧ್ವಜ ಹಾರಿಸುವ ಗುರಿ ಇಟ್ಟುಕೊಂಡಿದ್ದೇವೆ ಎಂದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮ್ಮ ಪಕ್ಷ 22 ಸ್ಥಾನಗಳನ್ನು ಗೆಲ್ಲುವುದು ನಿಶ್ಚಿತ. ರಾಜ್ಯದಲ್ಲಿ ಪಕ್ಷದ ಪರ ಎಲ್ಲ ಕಡೆ ಉತ್ತಮ ವಾತಾವರಣ ಮೂಡಿದೆ. ಕೇಂದ್ರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದು ಪ್ರಧಾನಿ ನರೇಂದ್ರ ಮೋದಿ ಎರಡನೆ ಬಾರಿಗೆ ಪ್ರಧಾನಿಯಾಗುವುದು ಖಚಿತ ಎಂದು ತಿಳಿಸಿದರು.
ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಮಾತನಾಡಿ, ಆಡಿಯೋ ಪ್ರಕರಣವನ್ನು ರಾಜ್ಯ ಸರ್ಕಾರ ಎಸ್ಐಟಿ ಮೂಲಕ ತನಿಖೆ ನಡೆಸಲು ಮುಂದಾಗಿರುವುದರ ಹಿಂದೆ ದುರುದ್ದೇಶವಿದೆ. ಪ್ರಕರಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆರೋಪಿಯಾಗಿರುವುದರಿಂದ ನಿಷ್ಪಕ್ಷಪಾತ ತನಿಖೆ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ನಮಗೆ ತನಿಖೆಯಾಗುವುದರಿಂದ ಯಾವುದೇ ಹೆದರಿಕೆ ಇಲ್ಲ. ಅದರ ಬಗ್ಗೆ ಭಯವೂ ಇಲ್ಲ. ಯಡಿಯೂರಪ್ಪ ಯಾವುದೇ ರೀತಿಯ ಅಡ್ಡದಾರಿ ಹಿಡಿದಿಲ್ಲ. ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಜೆಡಿಎಸ್ನ ಏಳು ಶಾಸಕರಿಂದ ಅಡ್ಡ ಮತದಾನ ಮಾಡಿಸಿದ್ದ ಅವರಿಗೆ ಈಗ ನಮ್ಮ ಪಕ್ಷದ ಬಗ್ಗೆ ಮಾತನಾಡಲು ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ಯಾವುದೇ ವ್ಯಕ್ತಿ ಸಂಕಷ್ಟದಲ್ಲಿ ಸಿಲುಕಿದಾಗ ನೈತಿಕತೆ ಬಗ್ಗೆ ಮಾತನಾಡುವುದು ಸರ್ವೆ ಸಾಮಾನ್ಯವಾಗಿದೆ.ಅನೈತಿಕತೆ ನಡೆಸಿರುವವರೇ ನೈತಿಕತೆ ಬಗ್ಗೆ ನೀತಿಪಾಠ ಹೇಳುವುದು ವ್ಯವಸ್ಥೆಯ ದುರಂತ.ನಮಗೆ ಯಾವುದೇ ವಿಚಾರದಲ್ಲೂ ಹಿಂಜರಿಕೆ ಇಲ್ಲ. ಮುಕ್ತವಾಗಿ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕೆಂದು ಹೇಳಿದರು.
ಸ್ವತಃ ಮುಖ್ಯಮಂತ್ರಿಗಳೇ ಆಡಿಯೋ ರೆಕಾರ್ಡಿಂಗ್ ಮಾಡಿಸಿದ್ದು ನಾನೇ ಎಂದು ಹೇಳಿದ ಮೇಲೆ ಅವರ ಕೈಕೆಳಗಿರುವ ಎಸ್ಐಟಿ ಹೇಗೆ ನಿಷ್ಪಕ್ಷಪಾತವಾಗಿ ತನಿಖೆ ಮಾಡುತ್ತದೆ.ಪ್ರಾಮಾಣಿಕತೆಯಿಂದ ತನಿಖೆಯಾದರೆ ಸಮಸ್ಯೆಯಿಲ್ಲ. ವಿರೋಧಪಕ್ಷದವರನ್ನು ಇಲ್ಲವೆ ಅವರ ರಾಜಕೀಯ ಎದುರಾಳಿಗಳನ್ನು ಗುರಿಯಾಗಿಟ್ಟುಕೊಂಡು ತನಿಖೆ ನಡೆಸಿದರೆ ವಿರೋಧ ಮಾಡಬೇಕಾಗುತ್ತದೆ. ಈಗ ವಿಧಾನಮಂಡಲದಲ್ಲಿ ನಾವು ಅದನ್ನೇ ಮಾಡುತ್ತಿದ್ದೇವೆಂದು ಹೇಳಿದರು.