ನವದೆಹಲಿ, ಫೆ.12-ನ್ಯಾಯಾಲಯ ಆದೇಶ ಉಲ್ಲಂಘಿಸಿ ನಿಂದಿಸಿದ ಆರೋಪದ ಮೇಲೆ ಸಿಬಿಐ ಮಾಜಿ ಹಂಗಾಮಿ ಅಧ್ಯಕ್ಷ ಎಂ.ನಾಗೇಶ್ವರರರಾವ್ ಮತ್ತು ಅದರ ಕಾನೂನು ಸಲಹೆಗಾರ ಬಶು ಅವರಿಗೆ ಸುಪ್ರೀಂಕೋರ್ಟ್ ಇಂದು ತಲಾ ಒಂದು ಲಕ್ಷ ರೂ.ಗಳ ದಂಡ ವಿಧಿಸಿದೆ. ಅಲ್ಲದೆ, ಶಿಕ್ಷೆ ರೂಪದಲ್ಲಿ ಇಂದಿನ ಕೋರ್ಟ್ ಕಲಾಪ ಮುಗಿಯುವವರೆಗೆ ಕೊಠಡಿಯೊಂದರಲ್ಲೇ ಇರುವಂತೆ ಸೂಚಿಸಿದೆ.
ಕೇಂದ್ರೀಯ ತನಿಖಾ ದಳದ ಹಂಗಾಮಿ ನಿರ್ದೇಶಕರಾಗಿದ್ದ ಅವಧಿಯಲ್ಲಿ ಸಿಬಿಐ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಿದ್ದಕ್ಕೆ ಸಂಬಂಧಿಸಿದಂತೆ ನಾಗೇಶ್ವರ್‍ರಾವ್ ಸುಪ್ರೀಂ ಕೋರ್ಟ್‍ನ ಕ್ಷಮೆ ಯಾಚಿಸಿದರೂ ಕೂಡ ಅವರು ಮಾಡಿದ ತಪ್ಪಿಗಾಗಿ ಈ ಶಿಕ್ಷೆ ವಿಧಿಸಲಾಗಿದೆ.
ಅಧಿಕಾರಿಗಳ ವರ್ಗಾವಣೆ ಮಾಡಬಾರದೆಂಬ ಸುಪ್ರೀಂ ಕೋರ್ಟ್‍ನ ಆದೇಶವಿದ್ದರೂ ಸಹ ನಾಗೇಶ್ವರ್‍ರಾವ್ ಬಿಹಾರದ ಆಶ್ರಯ ಮನೆ ಪ್ರಕರಣದ ತನಿಖೆ ನಡೆಸುತ್ತಿದ್ದ ಅಧಿಕಾರಿ ಶರ್ಮಾ ಅವರನ್ನು ವರ್ಗಾವಣೆ ಮಾಡಿದ್ದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೋರ್ಟ್ ಆದೇಶ ಉಲ್ಲಂಘನೆಯಾಗಿದೆ ಎಂದು ಫೆ.7 ರಂದು ಸುಪ್ರೀಂ ಕೋರ್ಟ್ ಸಿಬಿಐ ಗೆ ಚಾಟಿ ಬೀಸಿತ್ತು. ಅಷ್ಟೇ ಅಲ್ಲದೇ ಕೋರ್ಟ್ ಅನುಮತಿ ಇಲ್ಲದೇ ಅಧಿಕಾರಿಯನ್ನು ವರ್ಗಾವಣೆ ಮಾಡಿದ್ದ ನಾಗೇಶ್ವರ್‍ರಾವ್‍ಗೆ ನ್ಯಾಯಾಂಗ ನಿಂದನೆ ನೋಟೀಸ್ ಜಾರಿ ಮಾಡಿತ್ತು.