ಬೆಂಗಳೂರು, ಫೆ.12-ರಾಜ್ಯಸರ್ಕಾರ ಆಡಿಯೋ ಪ್ರಕರಣವನ್ನು ಎಸ್ಐಟಿ ಮೂಲಕ ತನಿಖೆ ನಡೆಸಲು ಮುಂದಾಗಿರುವುದನ್ನು ವಿರೋಧಿಸಿ ಬಿಜೆಪಿ ಮುಖಂಡರು ಇಂದು ಬಿ.ಎಸ್.ಯಡಿಯೂರಪ್ಪನವರ ನಿವಾಸದ ಬಳಿ ಪ್ರತಿಭಟನೆ ನಡೆಸಿದರು.
ಡಾಲರ್ಸ್ ಕಾಲೋನಿಯ ನಿವಾಸದ ಬಳಿ ಮುಖಂಡರಾದ ವೈ.ಎ.ನಾರಾಯಣಸ್ವಾಮಿ, ಎಂ.ಪಿ.ರೇಣುಕಾಚಾರ್ಯ, ತೇಜಸ್ವಿನಿ ರಮೇಶ್ಗೌಡ ಸೇರಿದಂತೆ ಮತ್ತಿತರರು ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರ ಹಾಕಿದರು.
ಯಡಿಯೂರಪ್ಪನವರನ್ನು ಕಟ್ಟಿ ಹಾಕುವ ಉದ್ದೇಶದಿಂದ ಸರ್ಕಾರ ಆಡಿಯೋ ಪ್ರಕರಣವನ್ನು ಎಸ್ಐಟಿ ಮೂಲಕ ತನಿಖೆ ನಡೆಸಲು ಮುಂದಾಗಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಕೂಡ ನೇರ ಆರೋಪಿ ಸ್ಥಾನದಲ್ಲಿರುವುದರಿಂದ ಅವರ ಬಗ್ಗೆಯೂ ತನಿಖೆಯಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸರ್ಕಾರ ಕುತಂತ್ರ ನಡೆಸುವ ಮೂಲಕ ಬಿಜೆಪಿ ಮತ್ತು ಯಡಿಯೂರಪ್ಪನವರನ್ನು ಕಟ್ಟಿ ಹಾಕಲು ಎಸ್ಐಟಿಯನ್ನು ಛೂ ಬಿಟ್ಟಿದೆ. ಕುಮಾರಸ್ವಾಮಿಯವರೇ ನಾನೇ ಆಡಿಯೋ ರೆಕಾರ್ಡ್ ಮಾಡಿಕೊಳ್ಳಲು ಸೂಚಿಸಿದ್ದೆ ಎಂದು ಹೇಳಿದ್ದಾರೆ.ಹೀಗಾಗಿ ಮೊದಲು ಅವರ ವಿರುದ್ಧ ಸ್ಪೀಕರ್ ತನಿಖೆಗೆ ಆದೇಶಿಸಲಿ ಎಂದು ಮನವಿ ಮಾಡಿದರು.
ಇನ್ನು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ವಿರುದ್ಧ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ನನ್ನನ್ನು 420 ಎನ್ನುವ ಮೂಲಕ ನನ್ನ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ.ನನ್ನ ಬಾಯಲ್ಲೂ ಮುಂದಿನ ದಿನಗಳಲ್ಲಿ ಇದಕ್ಕಿಂತಲೂ ಕೆಟ್ಟ ಪದಗಳು ಬರುತ್ತವೆ ಎಂದು ಎಚ್ಚರಿಸಿದರು.
ರೇವಣ್ಣ ಸತ್ಯ ಹರಿಶ್ಚಂದ್ರ ವಂಶದಿಂದ ಬಂದಿಲ್ಲ. ನನ್ನ ಬಗ್ಗೆ ಆಗಲಿ, ಬಿಜೆಪಿ ಬಗ್ಗೆ ಆಗಲಿ ಈ ರೀತಿ ಇಲ್ಲಸಲ್ಲದ ಆರೋಪ ಮಾಡಿದರೆ ಮುಂದಿನ ದಿನಗಳಲ್ಲಿ ಅವರ ಹಗರಣಗಳನ್ನು ಬಿಚ್ಚಿಡಬೇಕಾಗುತ್ತದೆ.ನಿಮ್ಮ ಗೊಡ್ಡು ಬೆದರಿಕೆಗೆ ನಾವು ಬಗ್ಗುವುದಿಲ್ಲ ಎಂದು ಗುಡುಗಿದರು.