ಪಾರ್ಲಿಮೆಂಟ್‍ನ ಎರಡು ಸದನದಲ್ಲೂ ಧರಣಿ ಮತ್ತು ಪ್ರತಿಭಟನೆ: ಕೆಲಕಾಲ ಕಲಾಪ ಮುಂದೂಡಿಕೆ

ದೆಹಲಿ, ಫೆ.12- ಸಂಸತ್‍ನ ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷಗಳು ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಧರಣಿ, ಪ್ರತಿಭಟನೆ ಇಂದೂ ಸಹ ಮುಂದುವರಿಯಿತು. ಇದರಿಂದ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು ಕೆಲಕಾಲ ಮುಂದೂಡಲಾಯಿತು.

ಲೋಕಸಭೆಯಲ್ಲಿಂದು ಪ್ರಶ್ನೋತ್ತರ ಕಲಾಪ ಆರಂಭವಾದ 20 ನಿಮಿಷಗಳ ಬಳಿಕ ಕಾಂಗ್ರೆಸ್ ಸದಸ್ಯರು ರಫೇಲ್ ಯುದ್ಧವಿಮಾನ ಖರೀದಿ ಒಪ್ಪಂದ ವಿಷಯ ಪ್ರಸ್ತಾಪಿಸಿ ಕಲಾಪಕ್ಕೆ ಅಡ್ಡಿಪಡಿಸಿದರು.

ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ಸವಿವರ ಚರ್ಚೆಯಾಗಿದೆ. ಆದಾಗ್ಯೂ ನೀವು ಮತ್ತೆ ಗದ್ದಲ ಸೃಷ್ಟಿಸುತ್ತಿರುವುದು ಸರಿಯಾದುದಲ್ಲ ಎಂದು ಹೇಳಿ ಪ್ರಶ್ನೋತ್ತರ ಕಲಾಪ ಮುಂದುವರಿಸಲು ಯತ್ನಿಸಿದರು. ಆದರೆ, ಪ್ರತಿಪಕ್ಷಗಳು ಘೋಷಣೆಯೊಂದಿಗೆ ಪ್ರತಿಭಟನೆ ಮುಂದುವರಿಸಿದ್ದರಿಂದ ಕಲಾಪವನ್ನು 20 ನಿಮಿಷಗಳ ಕಾಲ ಮುಂದೂಡಿದರು.

ರಾಜ್ಯಸಭೆಯಲ್ಲಿ ಎಸ್‍ಪಿ ಪ್ರತಿಭಟನೆ: ಅತ್ತ ರಾಜ್ಯಸಭೆಯಲ್ಲಿ ಸಮಾಜವಾದಿ ಪಕ್ಷದ ಸದಸ್ಯರು ಲಖನೌ ವಿಮಾನ ನಿಲ್ದಾಣದಲ್ಲಿ ಎಸ್‍ಪಿ ನಾಯಕ ಅಖಿಲೇಶ್ ಯಾದವ್ ಅವರನ್ನು ಅಲಹಾಬಾದ್‍ಗೆ ತೆರಳಲು ಪೊಲೀಸರು ಅಡ್ಡಿಪಡಿಸಿದ ವಿಷಯ ಪ್ರಸ್ತಾಪಿಸಿ ಗಲಭೆ ಸೃಷ್ಟಿಸಿದರು.

ಪ್ರಶ್ನೋತ್ತರ ಕಲಾಪ ಆರಂಭವಾಗುತ್ತಿದ್ದಂತೆ ಸಮಾಜವಾದಿ ಪಕ್ಷದ ಸದಸ್ಯರು ತಮ್ಮ ಪಕ್ಷದ ಮುಖಂಡರನ್ನು ವಿನಾಕಾರಣ ಲಖನೌನಲ್ಲಿ ತಡೆದು ಮುಂದಿನ ಪ್ರಯಾಣಕ್ಕೆ ಪೊಲೀಸರು ಅಡ್ಡಿಪಡಿಸಿದ್ದಾರೆ. ಇದು ಉತ್ತರ ಪ್ರದೇಶ ಸರ್ಕಾರದ ಉದ್ಧಟತನದ ಕೃತ್ಯವಾಗಿದೆ ಎಂದು ಆರೋಪಿಸಿದರು.

ಈ ಬಗ್ಗೆ ನೋಟಿಸ್ ನೀಡಿಲ್ಲವಾದ ಕಾರಣ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಸಭಾಪತಿ ವೆಂಕಯ್ಯನಾಯ್ಡು ಚರ್ಚೆಗೆ ಆಸ್ಪದ ನೀಡಲಿಲ್ಲ. ಇದರಿಂದ ಅಸಮಾಧಾನಗೊಂಡ ಸದಸ್ಯರು ಪ್ರತಿಭಟನೆ ಮುಂದುವರಿಸಿದ್ದರಿಂದ ಮೇಲ್ಮನೆ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ