ಬೆಂಗಳೂರು, ಫೆ.12-ನಗರದ ಕೆರೆಗಳು ಭೂಗಳ್ಳರ ಪಾಲಾಗುತ್ತಿವೆ. ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ, ಹೀಗೇ ಆದರೆ ಕುಡಿಯುವ ನೀರಿಗೆ ಏನು ಮಾಡುವುದು ಎಂದು ಶಾಸಕ ಮುನಿರತ್ನ ಆತಂಕ ವ್ಯಕ್ತಪಡಿಸಿದರು.
ನಗರದ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಕುರಿತಂತೆ ಬಿಡಬ್ಲ್ಯುಎಸ್‍ಎಸ್‍ಬಿ ಅಧ್ಯಕ್ಷ ತುಷಾರ್ ಗಿರಿನಾಥ್ ನೇತೃತ್ವದಲ್ಲಿಂದು ನಡೆದ ಪಾಲಿಕೆ ವಿಶೇಷ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ನಗರದ ಸ್ಯಾಂಕಿ ಟ್ಯಾಂಕಿ ಕೆರೆ ಒಳಗೆ ಜಿಎಲ್‍ಆರ್ (ಗ್ರೂಪ್ ಲೆವೆಲ್ ರಿಸೋರ್ಸ್) ನೀರು ಬರುತ್ತಿದೆ. ಅದನ್ನು ತಡೆಗಟ್ಟಿದರೆ ಎರಡು ವಾರ್ಡ್‍ಗಳಿಗೆ ಕುಡಿಯುವ ನೀರು ಕೊಡಬಹುದು ಎಂದು ಸಲಹೆ ನೀಡಿದರು.
ಸಾರ್ವಜನಿಕರಿಗೆ ಕುಡಿಯಲು ನೀರಿಲ್ಲ. ರೈಲ್ವೆ ಸ್ಟೇಷನ್‍ಗಳಿಗೆ ನೀರು ಕೊಡುತ್ತಿದ್ದೀರಿ. ಈ ಸ್ಟೇಷನ್‍ಗಳಿಗೆ ಎಷ್ಟು ನೀರು ಕೊಡುತ್ತಿದ್ದರೋ ಅಷ್ಟೂ ನೀರನ್ನು ಯಶವಂತಪುರ ವಾರ್ಡ್‍ಗೆ ಕೊಡಬೇಕು ಎಂದು ಒತ್ತಾಯಿಸಿದರು.
ನಗರದ ಎಲ್ಲಾ ವಾರ್ಡ್‍ಗಳಿಗೂ ಶುದ್ಧ ಕುಡಿಯುವ ನೀರು ಕೊಡುವುದು ಜನಪ್ರತಿನಿಧಿಗಳ ಕರ್ತವ್ಯ.ಅಧಿಕಾರಿಗಳು ನೀರಿನ ಕೊರತೆಯಾಗದಂತೆ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಗ್ರಾಮಾಂತರ ಪ್ರದೇಶದಲ್ಲಿ ನೀರಿನ ಸಮಸ್ಯೆ ಆಗಬಾರದೆಂದೇ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗ 110 ಹಳ್ಳಿಗಳಿಗೆ ನೀರು ಒದಗಿಸುವ ಕಾರ್ಯಕ್ಕೆ ಮುಂದಾಗಿದ್ದರು. ಮೊದಲು ನಗರದಲ್ಲಿ ನೀರು ಸೋರಿಕೆಯಾಗುವುದನ್ನು ತಡೆಗಟ್ಟಿ ಎಂದು ಒತ್ತಾಯಿಸಿದರು.
ಪ್ರತ್ಯೇಕ ಸಭೆ ಕರೆದು ಬೆಂಗಳೂರಿನ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು ಎಂದು ಮುನಿರತ್ನ ಸಲಹೆ ನೀಡಿದರು.