ಶ್ರೀನಗರ, ಫೆ.12-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರಗಾಮಿಗಳನ್ನು ಸದೆ ಬಡಿಯುವ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ತೀವ್ರಗೊಳಿಸಿವೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ನಸುಕಿನಲ್ಲಿ ನಡೆದ ಗುಂಡಿನ ಕಾಳಗಳಲ್ಲಿ ಯೋಧರೊಬ್ಬರು ಹುತಾತ್ಮರಾಗಿದ್ದು, ಉಗ್ರಗಾಮಿಯೊಬ್ಬ ಹತನಾಗಿದ್ದಾನೆ.
ಎನ್‍ಕೌಂಟರ್‍ನಲ್ಲಿ ಕೆಲವು ಯೋಧರಿಗೆ ಗಾಯಗಳಾಗಿವೆ. ಗುಂಡಿನ ಚಕಮಕಿ ವೇಳೆ ಪರಾರಿಯಾಗಿರುವ ಉಗ್ರರಿಗಾಗಿ ಸೇನಾಪಡೆ ಶೋಧ ಮುಂದುವರಿಸಿದೆ.
ರತ್ನಿಪೊರಾ ಪ್ರದೇಶದಲ್ಲಿ ಉಗ್ರಗಾಮಿಗಳು ಇರುವ ಬಗ್ಗೆ ನಿನ್ನೆ ರಾತ್ರಿ ಲಭಿಸಿದ ಖಚಿತ ಮಾಹಿತಿ ಮೇರೆಗೆ ಯೋಧರು ಆ ಪ್ರದೇಶವನ್ನು ಸುತ್ತುವರಿದು ಶೋಧ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಮರೆಯಲ್ಲಿ ಅಡಗಿದ್ದ ಉಗ್ರರು ಸೇನಾಪಡೆಗಳ ಮೇಲೆ ಗುಂಡು ಹಾರಿಸಿದಾಗ ಎನ್‍ಕೌಂಟರ್ ನಡೆಯಿತು.
ಈ ಘಟನೆಯಲ್ಲಿ ಯೋಧರೊಬ್ಬರು ಹುತಾತ್ಮರಾದರು ಗುಂಡಿನ ಚಕಮಕಿಯಲ್ಲಿ ಭಯೋತ್ಪಾದಕನೊಬ್ಬ ಹತನಾಗಿದ್ದು, ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹಿರಿಯ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.