ಬೆಂಗಳೂರು, ಫೆ.12- ಅತೃಪ್ತರ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಅಂತಿಮ ಕಸರತ್ತು ನಡೆಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅತೃಪ್ತರ ಬೇಡಿಕೆಗಳನ್ನು ಈಡೇರಿಸಲು ಸಹಮತ ವ್ಯಕ್ತಪಡಿಸಿದ್ದಾರೆ.
ಕಾಂಗ್ರೆಸ್ನಿಂದ ಅಸಮಾಧಾನಗೊಂಡು ಹೊರನಡೆಯಲು ಮುಂದಾಗಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಹೋದರ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ತಡರಾತ್ರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಅವರು ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಕೂಡ ಬೇಡಿಕೆಗಳ ಈಡೇರಿಕೆಗೆ ಮುಂದಾಗಿದ್ದು, ಶತಾಯ-ಗತಾಯ ಮೈತ್ರಿ ಸರ್ಕಾರದ ಉಳಿವಿಗೆ ದೋಸ್ತಿ ನಾಯಕರು ಅತೃಪ್ತರಿಗೆ ಕೊನೆಯ ಅವಕಾಶ ನೀಡಿದ್ದಾರೆ. ತಮಗಾಗಿರುವ ಅನ್ಯಾಯ ಸರಿಪಡಿಸುತ್ತೇವೆ. ತಾವು ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಹಿಂದಿರುಗಿ ಬನ್ನಿ ಎಂಬ ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ಸಚಿವ ಸ್ಥಾನದಿಂದ ಕೈಬಿಟ್ಟಿದ್ದಕ್ಕೆ ಬೇಸರಗೊಂಡು ತಮ್ಮ ಬೆಂಬಲಿಗರೊಂದಿಗೆ ಮುಂಬೈನಲ್ಲಿ ಬೀಡುಬಿಟ್ಟಿರುವ ರಮೇಶ್ ಜಾರಕಿಹೊಳಿ ಅವರಿಂದ ಸರ್ಕಾರಕ್ಕೆ ಆಪತ್ತು ಎದುರಾಗಿದೆ. ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಬೇಕು ಮತ್ತು ಅಧಿವೇಶನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕೆಂದು ವಿಪ್ ಜಾರಿ ಮಾಡಿದ್ದರೂ ರಮೇಶ್ ಜಾರಕಿಹೊಳಿ, ಉಮೇಶ್ ಜಾಧವ್, ಮಹೇಶ್ ಕುಮಟಳ್ಳಿ, ಬಿ.ನಾಗೇಂದ್ರ ಸಭೆಗೆ ಹಾಜರಾಗಿರಲಿಲ್ಲ. ಈ ನಡುವೆ ಯಡಿಯೂರಪ್ಪ ಅವರ ಆಪರೇಷನ್ ಕಮಲದ ಆಡಿಯೋ ಬಿಡುಗಡೆಗೊಂಡಿರುವುದರಿಂದ ಆಪರೇಷನ್ ಕಮಲದ ಪರಿಸ್ಥಿತಿ ಅಯೋಮಯವಾಗಿದೆ.
ಇಂತಹ ಸ್ಥಿತಿಯಲ್ಲಿ ಪಕ್ಷ ಬಿಟ್ಟು ಹೋಗುವುದು ಸರಿಯಲ್ಲ. ತಮ್ಮಂತವರು ಪಕ್ಷದಲ್ಲೇ ಉಳಿಯಬೇಕು.ತಮಗೆ ನಗರಾಭಿವೃದ್ಧಿ ಸಚಿವ ಸ್ಥಾನ ನೀಡುತ್ತೇವೆ ಎಂಬ ಭರವಸೆಯನ್ನು ಅವರ ಸಹೋದರರ ಮೂಲಕ ರಮೇಶ್ ಜಾರಕಿಹೊಳಿಗೆ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ.
ನಿನ್ನೆ ಬಾಲಚಂದ್ರ ಜಾರಕಿಹೊಳಿ ಅವರೊಂದಿಗೆ ಈ ಕುರಿತು ಸುಮಾರು 15 ನಿಮಿಷಗಳ ಕಾಲ ವೇಣುಗೋಪಾಲ್ ಅವರು ಮಾತುಕತೆ ನಡೆಸಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಮೈತ್ರಿ ಸರ್ಕಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಶಾಸಕಾಂಗ ಪಕ್ಷದ ನಾಯಕರು ವಿಪ್ ಉಲ್ಲಂಘಿಸಿದವರನ್ನು ಅನರ್ಹಗೊಳಿಸುವಂತೆ ಸ್ಪೀಕರ್ಗೆ ದೂರು ನೀಡಿದ್ದಾರೆ. ಆ ದೂರನ್ನು ಬೇಕಾದರೆ ವಾಪಸ್ ಪಡೆಯುತ್ತೇವೆ. ಅತೃಪ್ತರು ಯಾವುದೇ ನಿರ್ಧಾರ ಕೈಗೊಳ್ಳುವುದು ಬೇಡ.ಅವರ ಬೇಡಿಕೆಗಳನ್ನು ಈಡೇರಿಸಲು ಸಿದ್ಧರಿದ್ದೇವೆ ಎಂದು ತಿಳಿಸಿದ್ದಾರೆ.
ಈ ಸಂದೇಶವನ್ನು ಬಾಲಚಂದ್ರ ಜಾರಕಿಹೊಳಿ ಅವರು ಮುಂಬೈನಲ್ಲಿರುವ ಅವರ ಸಹೋದರ ರಮೇಶ್ ಜಾರಕಿಹೊಳಿ ಅವರಿಗೆ ತಲುಪಿಸಿದ್ದಾರೆ. ಮುಂದೇನಾಗಲಿದೆ ಎಂಬುದು ಇನ್ನೂ ಅಸ್ಪಷ್ಟ.
ಪಕ್ಷದ ಉಳಿವಿಗಾಗಿ ಹಲವು ಸಚಿವರು ತಮ್ಮ ಸ್ಥಾನ ತ್ಯಾಗ ಮಾಡಲು ಮುಂದಾಗಿದ್ದು, ಅತೃಪ್ತರಿಗೆ ಸಚಿವ ಸ್ಥಾನ ನೀಡುವ ಸಾಧ್ಯತೆ ಕೂಡ ಇದೆ.ವೇಣುಗೋಪಾಲ್ ಅವರು ಮಾತುಕತೆ ನಡೆಸಿದಂತೆ ಸಾಧ್ಯವಾದರೆ ಯು.ಟಿ.ಖಾದರ್ ಬಳಿ ಇರುವ ನಗರಾಭಿವೃದ್ಧಿ ಖಾತೆ ರಮೇಶ್ ಜಾರಕಿಹೊಳಿ ಅವರಿಗೆ ಕೊಡುವ ಸಾಧ್ಯತೆ ಇದೆ.
ರಮೇಶ್ ಜಾರಕಿಹೊಳಿ ಅವರು ತಮ್ಮ ನಿರ್ಧಾರ ಬದಲಿಸಿದರೆ ಅವರ ಬೆಂಬಲಿಗರು ಕೂಡ ತಮ್ಮ ನಿರ್ಧಾರಗಳನ್ನು ಬದಲಿಸುತ್ತಾರೆ ಎಂಬ ನಿರೀಕ್ಷೆ ಹೈಕಮಾಂಡ್ದಾಗಿದೆ.
ಈ ನಿಟ್ಟಿನಲ್ಲಿ ವೇಣುಗೋಪಾಲ್ ಅವರು ನಿನ್ನೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.