ಚನ್ನಪಟ್ಟಣ, ಫೆ.12- ಆರು ತಿಂಗಳ ಹಿಂದೆ ತಾಲ್ಲೂಕಿನ ಬ್ರಹ್ಮಣಿಪುರ ತೋಟದ ಮನೆಯಲ್ಲಿ ನಡೆದ ಕೊಲೆ ಪ್ರಕರಣವನ್ನು ಕೊನೆಗೂ ಬೇಧಿಸಿದ ಗ್ರಾಮಾಂತರ ಠಾಣೆ ಪೊಲೀಸರು ಒಡಹುಟ್ಟಿದ ಅಣ್ಣ ಸೇರಿ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುಟ್ಟರಾಜು (45), ಅರುಣ್ (24), ವೆಂಕಟೇಶ್ (21), ಕಾಶಿ (35) ಬಂಧಿತ ಆರೋಪಿಗಳು.
ಆರು ತಿಂಗಳ ಹಿಂದೆ ಆಸ್ತಿಗಾಗಿ ಆರೋಪಿ ಪುಟ್ಟರಾಜು ತನ್ನ ಸಹಚರರಾದ ಅರುಣ್, ವೆಂಕಟೇಶ್, ಕಾಶಿ ಜತೆ ಸೇರಿಕೊಂಡು ತನ್ನ ತಮ್ಮ ಪುಟ್ಟಸ್ವಾಮಿಯನ್ನು ತೋಟದ ಮನೆಯ ಎತ್ತಿನ ಗಾಡಿಯಲ್ಲಿ ಮಲಗಿದ್ದ ರೀತಿಯಲ್ಲಿಯೇ ಆತನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದರು.
ಈ ಪ್ರಕರಣದ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ಬಾನತ್, ಅಂದಿನ ಪೊಲೀಸ್ ಉಪವಿಭಾಗಾಧಿಕಾರಿ ಮಂಜುನಾಥ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಎ.ಪಿ.ಕುಮಾರ್ ನೇತೃತ್ವದಲ್ಲಿ ಪೊಲಿಸ್ ತನಿಖಾ ತಂಡ ರಚನೆಯಾಗಿ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದರು.
ಕೊಲೆಯಾದ ಪುಟ್ಟಸ್ವಾಮಿಯ ಸಹೋದರ ಪುಟ್ಟರಾಜು ತನ್ನ ಸಹೋದರನ ಕೊಲೆ ಪ್ರಕರಣವನ್ನು ಬೇಧಿಸಲು ಗ್ರಾಮಾಂತರ ಠಾಣೆ ಪೊಲೀಸರು ವಿಫಲರಾಗಿದ್ದಾರೆಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಹಾಗೂ ಮಾಜಿ ಸಚಿವರ ಮುಖಾಂತರ ಪೊಲೀಸರ ಮೇಲೆ ಭಾರೀ ಒತ್ತಡ ಹಾಕಿದ್ದ.
ರಾಜಕೀಯ ನಾಯಕರು ಹಾಗೂ ಮೇಲಧಿಕಾರಿಗಳ ಒತ್ತಡಕ್ಕೆ ಸಿಲುಕಿದ ಪೊಲೀಸ್ ತಂಡ ಪ್ರಕರಣದಲ್ಲಿ ತೀವ್ರ ಕಾರ್ಯಾಚರಣೆ ನಡೆಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. ಹಲವಾರು ಮಾಹಿತಿ ಕಲೆ ಹಾಕಿದ ಪೊಲೀಸರು ಕೊಲೆ ಮಾಡಿ ಏನೂ ಗೊತ್ತಿಲ್ಲದಂತೆ ಗ್ರಾಮದಲ್ಲಿಯೇ ಇದ್ದ ಆರೋಪಿಗಳನ್ನು ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಮೊದಲನೆ ಆರೋಪಿಯಾಗಿರುವ ಕೊಲೆಯಾದ ಪುಟ್ಟಸ್ವಾಮಿಯ ಅಣ್ಣ ಪುಟ್ಟರಾಜುನನ್ನು ವಿಚಾರಣೆಗೊಳಪಡಿಸಿದಾಗ ಹಲವಾರು ಸತ್ಯಗಳನ್ನು ಪೊಲೀಸರಿಗೆ ತಿಳಿಸಿದ್ದಾನೆ. ಜಮೀನ್ದಾರರಾದ ಅಯ್ಯಪ್ಪಣ್ಣ ಕುಟುಂಬದ ಜವಾಬ್ದಾರಿ ಹೊತ್ತಿದ್ದ ಅಣ್ಣ ಪುಟ್ಟರಾಜು ತಮ್ಮನಿಗೆ ಅರಿವಿಲ್ಲದಂತೆ ಜಮೀನು ಖರೀದಿ ಹಾಗೂ ಹಣವನ್ನು ಗೌಪ್ಯ ಮಾಡಿದ್ದನೆಂದು ಈ ವಿಚಾರದಲ್ಲಿ ತಮ್ಮ ಪ್ರಶ್ನೆ ಮಾಡಿದ್ದ. ಮುಂದಿನ ದಿನಗಳಲ್ಲಿ ತನಗೆ ತೊಂದರೆ ಎಂದು ತಿಳಿದು ತಮ್ಮನನ್ನು ಕೊಲೆ ಮಾಡಿರುವುದಾಗಿ ತಪ್ಪೋಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ತಮ್ಮನ ಕೊಲೆಗೆ ಮುಹೂರ್ತ ಇಟ್ಟಿದ್ದ ಪುಟ್ಟರಾಜು ಸಹಪಾಠಿಗಳಾದ ವೆಂಕಟೇಶ್ಗೆ ಎರಡು ಲಕ್ಷದ ಆಮಿಷ, ಅರುಣ್ಗೆ ಆತನ ಮದುವೆಯ ಸಂಪೂರ್ಣ ಖರ್ಚಿನ ಜವಾಬ್ದಾರಿ ಹಾಗೂ ಕಾಶಿ ಆಲಿಯಾಸ್ ನಾಗರಾಜುಗೆ ಆತನ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವುದಾಗಿ ಭರವಸೆ ನೀಡಿ ಅವರನ್ನು ಪ್ರಚೋದಿಸಿ ಕೊಲೆ ನಡೆಸಿದೆ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.
ಎತ್ತಿನಗಾಡಿಯಲ್ಲಿ ಮಲಗಿದ್ದ ಪುಟ್ಟಸ್ವಾಮಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.
ಪೊಲೀಸ್ ಇಲಾಖೆಗೆ ತಲೆ ನೋವಾಗಿದ್ದ ಬ್ರಹ್ಮಣಿಪುರದ ಪುಟ್ಟಸ್ವಾಮಿ ಕೊಲೆ ಪ್ರಕರಣವನ್ನು ಇಂದಿನ ಪೊಲೀಸ್ ಉಪವಿಭಾಗಾಧಿಕಾರಿ ಮಲ್ಲೇಶ್ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕ ಎ.ಪಿ.ಕುಮಾರ್ ನೇತೃತ್ವದ ತಂಡ ಗ್ರಾಮಾಂತರ ಪೊಲೀಸ್ ಠಾಣೆ ಪಿಎಸ್ಐ ಪ್ರಕಾಶ್, ಎಂ.ಕೆ.ದೊಡ್ಡಿ ಪೊಲೀಸ್ ಠಾಣೆಯ ಪಿಎಸ್ಐ ಸದಾನಂದ, ಸಿಬ್ಬಂದಿಗಳಾದ ರಾಜು, ಮಂಜುನಾಥ, ಸುರೇಶ್, ಪ್ರಕಾಶ್, ಶಿವರಾಜು, ಪ್ರವೀಣ, ಸಿದ್ದಗಂಗ, ಗೋವಿಂದರಾಜು, ಗೃಹರಕ್ಷಕ ದಳದ ವೆಂಕಟೇಶ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ಬಾನತ್ ಅಭಿನಂದನೆ ಸಲ್ಲಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.