ಬೆಂಗಳೂರು, ಫೆ.11- ಕ್ರೀಡೆ ಜೀವನದ ಪ್ರಮುಖ ದಿನಚರಿಯಾಗಬೇಕು. ಪ್ರತಿ ನಿತ್ಯ ಆಟವಾಡುವುದರಿಂದ ಮಾನಸಿಕ, ದೈಹಿಕ ಆರೋಗ್ಯ ಸುಧಾರಿಸಲಿದೆ ಎಂದು ಮೇಯರ್ ಗಂಗಾಂಬಿಕೆ ಹೇಳಿದರು.
ನಾಡಪ್ರಭು ಕೆಂಪೇಗೌಡ ದಿನಾಚರಣೆ ಅಂಗವಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಹಾಪೌರರ ತಂಡದ, ಆಯುಕ್ತರು ಹಾಗೂ ಮಾಧ್ಯಮ ತಂಡದ ನಡುವೆ ನಡೆಯಲಿರುವ ಕ್ರಿಕೆಟ್ ಪಂದ್ಯಾವಳಿಯ ತರಬೇತಿ ಶಿಬಿರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಕ್ರೀಡೆಯಲ್ಲಿ ಪಾಲ್ಗೊಳ್ಳುವುದಕ್ಕೆ ಯಾವುದೇ ವಯೋಮಿತಿ ಇಲ್ಲ. ನಗರದಲ್ಲಿ ವಾಸಿಸುತ್ತಿರುವ ಪ್ರತಿಯೊಬ್ಬರು ತಮ್ಮ ಒತ್ತಡ ನಿರ್ವಹಣೆ ಮಾಡಿಕೊಳ್ಳಲು ಒಂದಿಲ್ಲ ಒಂದು ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.
ಪ್ರತಿ ವರ್ಷದಂತೆ ನಾಡಪ್ರಭು ಕೆಂಪೇಗೌಡ ದಿನಾಚರಣೆ ಅಂಗವಾಗಿ ಈ ಬಾರಿಯೂ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದ್ದು , ಫೆ.17ರಂದು ಪಂದ್ಯಾವಳಿ ನಡೆಯಲಿದೆ ಎಂದರು.
20-20 ಪಂದ್ಯದಲ್ಲಿ ಮಹಾ ಪೌರರ ತಂಡ ಆಯುಕ್ತರ ತಂಡವನ್ನು ಎದುರಿಸಲಿದೆ. ಎರಡನೆಯ ಪಂದ್ಯದಲ್ಲಿ ಪಾಲಿಕೆ ಸದಸ್ಯರು ಮತ್ತು ಮಾಧ್ಯಮ ತಂಡದವರ ನಡುವೆ ಪಂದ್ಯ ನಡೆಯಲಿದೆ ಎಂದರು.
ಇದರ ಜತೆಗೆ ಮಹಿಳಾ ಪಾಲಿಕೆ ಸದಸ್ಯರಿಗೆ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿತ್ತು.ಪ್ರತಿಯೊಬ್ಬರು ಇದರಲ್ಲಿ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ವಿಪಕ್ಷ ನಾಯಕ ಪದ್ಮನಾಭ ರೆಡ್ಡಿ, ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಆಡಳಿತ ಪಕ್ಷದ ಮಾಜಿ ನಾಯಕ ಎಂ.ಶಿವರಾಜ್, ಬಿಬಿಎಂಪಿ ಸದಸ್ಯರಾದ ಜೈಪಾಲ್, ಬಾಲಕೃಷ್ಣ , ದಾಸೇಗೌಡ, ಮಾಧ್ಯಮ ತಂಡದ ನಾಯಕ ಸುರೇಶ್ ಮತ್ತಿತರರು ಹಾಜರಿದ್ದರು.