ನವದೆಹಲಿ, ಫೆ.11-ಅಲ್ಪಸಂಖ್ಯಾತರ ರಾಜ್ಯವಾರು ಜನಸಂಖ್ಯೆ ಹಿನ್ನೆಲೆಯಲ್ಲಿ ಆ ಸಮುದಾಯದ(ಅಲ್ಪಸಂಖ್ಯಾತರು) ಪದವನ್ನು ಅರ್ಥೈಸುವುದಕ್ಕಾಗಿ ಮಾರ್ಗಸೂಚಿಗಳಿಗಾಗಿ ಪ್ರಾತಿನಿಧ್ಯ ಕುರಿತು ಇನ್ನು ಮೂರು ತಿಂಗಳಲ್ಲಿ ನಿರ್ಧಾರ ಕೈಗೊಳ್ಳುವಂತೆ ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗ(ಎನ್‍ಸಿಎಂ)ಕ್ಕೆ ಸುಪ್ರೀಂಕೋರ್ಟ್ ಇಂದು ನಿರ್ದೇಶನ ನೀಡಿದೆ.
ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ನೇತೃತ್ವದ ಪೀಠ ಇದೇ ವೇಳೆ ಬಿಜೆಪಿ ನಾಯಕ ಮತ್ತು ವಕೀಲ ಅಶ್ವಿನ್ ಉಪಾಧ್ಯಾಯ ಅವರಿಗೆ ಅಲ್ಪಸಂಖ್ಯಾತರ ಆಯೋಗಕ್ಕೆ ತಮ್ಮ ಪ್ರಾತಿನಿಧ್ಯವನ್ನು ಮರು ಸಲ್ಲಿಸುವಂತೆ ಹಾಗೂ ಅದಕ್ಕೆ ಪ್ರತಿಯಾಗಿ ಆಯೋಗವು ಇನ್ನು ಮೂರು ತಿಂಗಳ ಒಳಗೆ ನಿರ್ಧಾರ ಕೈಗೊಳ್ಳಲು ಸಾಧ್ಯವಾಗುವುದಾಗಿ ತಿಳಿಸಿದೆ.
ಅಲ್ಪಸಂಖ್ಯಾತರು ಎಂಬ ಪದವನ್ನು ಮರು ವ್ಯಾಖ್ಯಾನ ಮಾಡಬೇಕಾದ ಅಗತ್ಯವಿದೆ ಹಾಗೂ ರಾಷ್ಟ್ರವಾರು ಜನಸಂಖ್ಯೆ ಅಂಕಿ-ಅಂಶಗಳ ಬದಲು ರಾಜ್ಯದಲ್ಲಿರುವ ಆ ಸಮುದಾಯದ ಜನಸಂಖ್ಯೆ ಹಿನ್ನೆಲೆಯಲ್ಲಿ ಇದನ್ನು ಪರಿಗಣಿಸಬೇಕಾಗಿದೆ ಎಂದು ಉಪಾಧ್ಯಾಯ ತಮ್ಮ ಮನವಿಯಲ್ಲಿ ಕೋರಿದ್ದರು.
ರಾಷ್ಟ್ರೀಯ ಅಂಕಿ-ಅಂಶಗಳ ಪ್ರಕಾರ ಬಹು ಸಂಖ್ಯಾತರಾಗಿರುವ ಹಿಂದುಗಳು ಈಶಾನ್ಯ ರಾಜ್ಯಗಳು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ. ಈ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಿಗೆ ಕಾನೂನುಬದ್ಧವಾಗಿ ಲಭಿಸಬೇಕಾದ ಪ್ರಯೋಜನಗಳಿಂದ ಹಿಂದುಗಳು ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಪಸಂಖ್ಯಾತ ಎಂಬ ಪದದ ಅರ್ಥವನ್ನು ಮರು ಪರಿಗಣಿಸಬೇಕು ಎಂದು ಅವರು ಆಗ್ರಹಿಸಿದ್ದರು.