
ನಾಗಪುರ, ಫೆ.11-2003 ಮುಂಬೈ ಸ್ಫೋಟ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಅಪರಾಧಿ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಮಹಮದ್ ಹನೀಫ್ ಸೈಯ್ಯದ್ ಸಾವನ್ನಪ್ಪಿದ್ದಾನೆ.
ನಾಗಪುರ ಕೇಂದ್ರ ಕಾರಾಗೃಹದಲ್ಲಿದ್ದ ಹನೀಫ್ ಕಳೆದ ಶನಿವಾರ ತೀವ್ರ ಅಸ್ವಸ್ಥಗೊಂಡಿದ್ದ. ಆತನನ್ನು ನಾಗಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಗದೆ ಆತ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಈ ಬಗ್ಗೆ ಮಾಹಿತಿ ನೀಡಿರುವ ಜೈಲು ಸೂಪರಿಂಟೆಂಡ್ ರಾಣಿ ಭೋಸ್ಲೆ, ಹನೀಫ್ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವೈದ್ಯಕೀಯ ವರದಿ ತಮ್ಮ ಕೈ ಸೇರಿದ ಬಳಿಕ ಈ ಬಗ್ಗೆ ಮಾಹಿತಿ ದೊರೆಯಲಿದೆ. ಪ್ರಸ್ತುತ ಆತನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
2003ರ ಆಗಸ್ಟ್ 25ರಂದು ಮುಂಬೈನ ಗೇಟ್ ವೇ ಆಫ್ ಇಂಡಿಯಾ ಮತ್ತು ಝವೇರಿ ಬಜಾರ್ನಲ್ಲಿ ನಡೆದಿದ್ದ ಸರಣಿ ಸ್ಫೋಟದಲ್ಲಿ 54 ಮಂದಿ ಸಾವನ್ನಪ್ಪಿ 244 ಗಾಯಗೊಂಡಿದ್ದರು. ಈ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಹನೀಫ್ ಮತ್ತು ಆತನ ಪತ್ನಿ ಅಶ್ರತ ಅನ್ಸಾರಿ ಕೂಡ ಇದ್ದರು. 2009ರಲ್ಲಿ ಪೋಟಾ ಕಾಯ್ದೆಯಡಿ ಕೋರ್ಟ್ ಇವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಹನೀಫ್ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್ ಆಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಪ್ರಕರಣದಲ್ಲಿ ಅದೇ ಮೊದಲ ಬಾರಿಗೆ ಲಷ್ಕರ್ ಉಗ್ರ ಸಂಘಟನೆ ತನ್ನ ದುಷ್ಕøತ್ಯಕ್ಕೆ ಒಂದಿಡೀ ಕುಟುಂಬವನ್ನು ಬಳಸಿಕೊಂಡಿತ್ತು.