ಬೆಂಗಳೂರು, ಫೆ.11-ಶಾಸಕರ ರಾಜೀನಾಮೆಯನ್ನು ಒಪ್ಪಲು ಸ್ಪೀಕರ್ ಅವರಿಗೆ ಹಣ ನೀಡಲಾಗಿದೆ ಎಂಬ ಆಡಿಯೋ ಪ್ರಕರಣದ ತನಿಖೆಯನ್ನು ಎಸ್ಐಟಿಯಿಂದ ನಡೆಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಘೋಷಿಸುತ್ತಿದ್ದಂತೆ ಬಿಜೆಪಿ ವಿರೋಧ ವ್ಯಕ್ತಪಡಿಸಿತು.
ಸ್ಪೀಕರ್ ರಮೇಶ್ಕುಮಾರ್ ಅವರ ಸಲಹೆ ಮೇರೆಗೆ ಕಲಾಪದಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಆಡಿಯೋ ಪ್ರಕರಣದ ಬಗ್ಗೆ ವಿಶೇಷ ತಂಡ ರಚಿಸಿ ತನಿಖೆ ಮಾಡುವುದಾಗಿ ಹೇಳಿದರು. ಸರ್ಕಾರ ರಚನೆಯಾದ ದಿನದಂದಲೂ ಅಸ್ಥಿರಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ. ದಾಖಲೆ ಪ್ರಮಾಣದಷ್ಟು ಗಡುವನ್ನು ಸರ್ಕಾರಕ್ಕೆ ನೀಡಲಾಗಿದೆ. ಈ ದಿನ ಪತನಗೊಳ್ಳುತ್ತದೆ, ನಾಳೆ ಪತನಗೊಳ್ಳುತ್ತದೆ ಎಂಬೆಲ್ಲಾ ವರದಿಗಳು ಬಂದಿವೆ. ಸರ್ಕಾರವನ್ನು ಅಭದ್ರಗೊಳಿಸುವ ಪ್ರಯತ್ನದ ಮೂಲಕ ನಾವು ಜನರ ಬದುಕಿನ ಜತೆ ಚೆಲ್ಲಾಟವಾಡುತ್ತಿದ್ದೇವೆ. ಇದಕ್ಕೆ ಇತಿಶ್ರೀ ಹಾಡಬೇಕಿದೆ. ನಿಮ್ಮ ಮೇಲಿನ ಕಳಂಕವನ್ನು ತೊರೆದು ಹಾಕಬೇಕಿದೆ. ಸತ್ಯಾಸತ್ಯತೆ ಹೊರ ತರುವ ಸಲುವಾಗಿ, ಇದರ ಹಿಂದೆ ಯಾರು ಇದ್ದಾರೆ, ಏನೆಲ್ಲಾ ನಡೆದಿದೆ ಎಂಬ ವಿಷಯಗಳನ್ನು ಇಟ್ಟುಕೊಂಡು ಸಮ್ಮಿಶ್ರ ಸರ್ಕಾರ ರಚನೆಯಾದ ದಿನದಿಂದ ಈವರೆಗಿನ ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸುವುದಾಗಿ ಹೇಳಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿಯ ಹಿರಿಯ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು, ಮುಖ್ಯಮಂತ್ರಿ ಅವರು ಕೂಡ ಈ ಪ್ರಕರಣದಲ್ಲಿ ಭಾಗೀದಾರರಾಗಿದ್ದಾರೆ. ಸ್ಪೀಕರ್ ಅವರ ಕುರಿತಂತೆ ಆಡಿಯೋದಲ್ಲಿ ಕೇಳಿ ಬಂದಿರುವ ಮಾತುಗಳಿಗೆ ಸೀಮಿತವಾಗಿ ತನಿಖೆ ಮಾಡುವುದಾದರೆ ನಾವು ರಾಜೀ ಆಗುತ್ತೇವೆ. ಅದನ್ನು ಬಿಟ್ಟು ಸರ್ಕಾರ ರಚನೆಯಾದ ದಿನದಿಂದಲೂ ತನಿಖೆ ಮಾಡುತ್ತೇವೆ ಎಂದರೆ ನಾವು ಒಪ್ಪುವುದಿಲ್ಲ. ಯಾವಾಗ, ಯಾರು ಏನೆಲ್ಲಾ ಮಾಡಿದ್ದಾರೆ, ಕೋಲಾರದ ಶ್ರೀನಿವಾಸ್ಗೌಡ ಏನೆಲ್ಲಾ ಮಾತನಾಡಿದ್ದಾರೆ ಎಂಬ ಆಡಿಯೋಗಳು ನಮ್ಮ ಬಳಿ ಇವೆ. ಸಮಯ ಕೊಡಿ ನಾವೂ ಅದನ್ನೆಲ್ಲಾ ಚರ್ಚೆ ಮಾಡುತ್ತೇವೆ. ಆದರೆ, ಈ ಸಂದರ್ಭದಲ್ಲಿ ಅದನ್ನೆಲ್ಲಾ ಪ್ರಸ್ತಾಪ ಮಾಡಿದರೆ ನಿಮ್ಮ ಮನಸ್ಸಿಗೆ ನೋವಾಗಬಹುದು ಎಂಬ ಕಾರಣಕ್ಕಾಗಿ ನಾವು ಹೆಚ್ಚು ಮಾತನಾಡಿಲ್ಲ. ನಮಗೆ ಸರ್ಕಾರ ನಡೆಸುವ ತನಿಖೆ ಮೇಲೆ ನಂಬಿಕೆ ಇಲ್ಲ. ಸ್ಪೀಕರ್ ಅವರೇ ವಿಶೇಷ ತನಿಖಾ ದಳ ರಚನೆ ಮಾಡಿ ತನಿಖೆ ನಡೆಸಲಿ ನಾವು ಸಮ್ಮತ್ತಿಸುತ್ತೇವೆ ಎಂದರು.
ಬಿಜೆಪಿಯ ಗೋವಿಂದಕಾರಜೋಳ ಇದಕ್ಕೆ ಬೆಂಬಲ ವ್ಯಕ್ತಪಡಿಸಿದರು.ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಸ್ಪೀಕರ್ ಅವರ ಮೇಲೆ ಕೇಳಿಬಂದಿರುವ ಆರೋಪ ತೊರೆದು ಹಾಕಬೇಕಿದೆ.ಆ ನಿಟ್ಟಿನಲ್ಲಿ ತನಿಖೆ ನಡೆಯಬೇಕು.ಜತೆಗೆ ಇದರಲ್ಲಿ ಹಲವಾರು ಹೆಸರುಗಳು ಪ್ರಸ್ತಾಪವಾಗಿವೆ. ಸತ್ಯಾಸತ್ಯತೆಗಳು ಜನತೆಗೆ ಗೊತ್ತಾಗಬೇಕು. ಹಾಗಾಗಿ ಸಮಗ್ರ ತನಿಖೆ ನಡೆಸಬೇಕೆಂದು ಮುಖ್ಯಮಂತ್ರಿಗೆ ಬೆಂಬಲ ವ್ಯಕ್ತಪಡಿಸಿದರು.
ಯಾರು ಯಾರಬೇಕಾದರೂ ಲಘುವಾಗಿ ಮಾತನಾಡುವುದು, ಮನಸ್ಸಿಗೆ ಬಂದಂತೆ ಮಾತನಾಡಬಹುದು ಎಂಬ ವಾತಾವರಣವನ್ನು ಸರಿಪಡಿಸಬೇಕು.ನಮ್ಮೆಲ್ಲರ ಮಾನ, ಮರ್ಯಾದೆ ಕಾಪಾಡಬೇಕಿದೆ.ಆಡಿಯೋ ಪ್ರಕರಣದ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕಿದೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್ ಕೂಡ ಇದಕ್ಕೆ ದನಿ ಗೂಡಿಸಿದರು.
ಸಚಿವ ಸಾ.ರಾ.ಮಹೇಶ್ ಮಾತನಾಡಿ, ಜನರಿಂದ ಚುನಾಯಿತರಾದರೆ ಐದು ವರ್ಷದಲ್ಲಿ ಹಣ ಮಾಡಿಕೊಳ್ಳಬಹುದು ಎಂಬ ಅಭಿಪ್ರಾಯ ಜನಸಾಮಾನ್ಯರಲ್ಲಿ ಇದೆ.ಒಮ್ಮೆ ಚುನಾಯಿತರಾದವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಲು ಅವಕಾಶ ಕೊಡಬಾರದು.ಒಂದು ವೇಳೆ ರಾಜೀನಾಮೆ ಕೊಟ್ಟಿದ್ದೇ ಆದರೆ, ಅವರು ಜೀವನ ಪರ್ಯಂತ ಚುನಾವಣೆಯಲ್ಲಿ ಸ್ಪರ್ಧಿಸದಂತಹ ಕಾನೂನನ್ನು ದೇಶದಲ್ಲೇ ಮಾದರಿಯಾಗಿ ನಮ್ಮ ವಿಧಾನಸಭೆ ಜಾರಿಗೊಳಿಸಲಿ ಎಂದು ಹೇಳಿದರು.
ಅಂತಿಮವಾಗಿ ಮಾತನಾಡಿದ ರಮೇಶ್ಕುಮಾರ್ ಅವರು, ಸ್ವತಂತ್ರವಾಗಿ ತನಿಖೆ ನಡೆಸಲು ನನಗೆ ಅವಕಾಶ ಇಲ್ಲ. ನ್ಯಾಯಾಂಗ ಅಥವಾ ಸದನ ಸಮಿತಿಯ ತನಿಖೆಯಲ್ಲಿ ವಿಳಂಬವಾಗುತ್ತದೆ. ಹಾಗಾಗಿ ವಿಶೇಷ ತನಿಖಾ ದಳ ಮಾಡಿ 15 ದಿನದಲ್ಲಿ ವರದಿ ನೀಡುವಂತೆ ಮನವಿ ಮಾಡಿದ್ದೇನೆ. ನಾನು ರಾಜೀನಾಮೆ ನೀಡಲು ಮುಂದಾಗಿದ್ದಾಗ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಶಾಸಕ ಎಚ್.ಕೆ.ಪಾಟೀಲ್ ಅವರು ಅಂತಹ ನಿರ್ಧಾರ ತೆಗೆದುಕೊಳ್ಳದಂತೆ ಕಟ್ಟಿ ಹಾಕಿದ್ದಾರೆ. ಸುದೀರ್ಘಕಾಲ ಆರೋಪ ಹೊತ್ತುಕೊಂಡು ಕೂರಲು ಆಗುವುದಿಲ್ಲ. ಹಾಗಾಗಿ ನಾವು ಆಡಳಿತ ಯಂತ್ರದಲ್ಲಿ ನಂಬಿಕೆ ಇಡಬೇಕಾಗುತ್ತದೆ. ಸರ್ಕಾರವೇ ತಂಡ ರಚನೆ ಮಾಡಿ ತನಿಖೆ ನಡೆಸಲು ಮೆಟಿರಲ್ ಪ್ಯಾಕ್ ಏನು ಎಂದು ನಾನು ಸದನಕ್ಕೆ ತಿಳಿಸಿದ್ದೇನೆ. ನನ್ನ ಮೇಲೆ ಬಂದಿರುವ ಆರೋಪಕ್ಕೆ ವಿವರಣೆ ನೀಡಿದ್ದು, ಸರ್ಕಾರ ಅದರ ಸುತ್ತಮುತ್ತ ತನಿಖೆ ನಡೆಸಲಿ ಎಂದು ಹೇಳಿ ಕಲಾಪವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.