
ನವದೆಹಲಿ: ಅಸ್ಸಾಂ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿಯವರ ಪ್ರವಾಸಕ್ಕೆ ಆಂಧ್ರಪ್ರದೇಶದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಟ್ವಿಟರ್ನಲ್ಲಿ ಸಾರ್ವಜನಿಕರು ‘ಗೋ ಬ್ಯಾಕ್ ಮೋದಿ’ ಎಂಬ ಹ್ಯಾಶ್ ಟ್ಯಾಗ್ ಬಳಸಿ ಪ್ರತಿರೋಧ ಒಡ್ಡುತ್ತಿದ್ದಾರೆ. ಅತ್ತ ದೆಹಲಿಯಲ್ಲಿ ಸಿಎಂ ಚಂದ್ರಬಾಬು ನಾಯ್ಡು ನೇತೃತ್ವದಲ್ಲಿ ಕೇಂದ್ರದ ವಿರುದ್ದ ಬೃಹತ್ ಪ್ರತಿಭಟನೆಗೆ ವೇದಿಕೆ ಸಜ್ಜಾಗುತ್ತಿದ್ದರೇ, ಇತ್ತ ಆಂಧ್ರದಲ್ಲಿ ಕೂಡ ಸ್ಥಳೀಯರು ಮೋದಿಯವರ ಭೇಟಿಯನ್ನು ವಿರೋಧಿಸುತ್ತಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ‘ಗೋ ಬ್ಯಾಕ್ ಮೋದಿ’ ಟ್ರೆಂಡಿಗ್ನಲ್ಲಿದ್ದು, ಪ್ರಧಾನಿ ಮೋದಿಯವರಿಗೆ ಮುಖಭಂಗವಾಗಿದೆ.
ಲೋಕಸಭೆ ಚುನಾವಣೆ ಹೊತ್ತಲ್ಲಿಯೇ ಆಂಧ್ರಪ್ರದೇಶ ಬಿಜೆಪಿ ಸಾಲುಸಾಲು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಈ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಮೋದಿ ಆಂಧ್ರಕ್ಕೆ ಆಗಮಿಸುತ್ತಿದ್ದಾರೆ. ಇಂದು ಬೆಳಿಗ್ಗೆ ಸುಮಾರು 10.45 ವಿಜಯವಾಡ ಏರ್ಪೋರ್ಟ್ ಆಗಮಿಸಲಿದ್ದಾರೆ. ಅದಾದ ಬಳಿಕ ಗುಂಟೂರು ಮತ್ತು ಕೃಷ್ಣಪಟ್ನಂ ಪ್ರದೇಶದಲ್ಲಿ ನಡೆಯಲಿರುವ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇಲ್ಲಿ ಸಾರ್ವಜನಿಕ ಸಮಾವೇಶವನ್ನುದ್ದೇಶಿ ಮಾತನಾಡಿದ ನಂತರದಲ್ಲಿ ಕರ್ನಾಟಕದತ್ತ ಪ್ರಧಾನಿ ಪ್ರಯಾಣ ಬೆಳಸಲಿದ್ದಾರೆ ಎನ್ನುತ್ತಿವೆ ಮೂಲಗಳು.
ಕಳೆದ ವರ್ಷ ಮಾರ್ಚ್ನಲ್ಲಿ ಒಂದು ದಿನ ರಾತ್ರೋರಾತ್ರಿ ನಡೆದ ದಿಢೀರ್ ನಾಟಕೀಯ ಬೆಳವಣಿಗೆಯಲ್ಲಿ ಟಿಡಿಪಿ ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಳ್ಳುವ ನಿರ್ಧಾರ ಪ್ರಕಟಿಸಿತ್ತು. ಕೇಂದ್ರ ಎನ್ಡಿಎ ಸರಕಾರದ ಸಂಪುಟಕ್ಕೆ ಇಬ್ಬರು ಟಿಡಿಪಿ ಸಚಿವರು ರಾಜೀನಾಮೆ ನೀಡಲು ನಿರ್ಧರಿಸಿದರು. ಈ ಬೆನ್ನಲ್ಲೇ ಆಂಧ್ರದಲ್ಲಿ ಟಿಡಿಪಿ ಜೊತೆಗಿನ ಮೈತ್ರಿಯನ್ನು ಬಿಜೆಪಿ ಕೂಡ ಕಡಿದುಕೊಂಡಿತ್ತು. ಈ ನಿಟ್ಟಿನಲ್ಲಿಯೇ ಬಿಜೆಪಿಯ ಕೆ. ಶ್ರೀನಿವಾಸ ರಾವ್ ಮತ್ತು ಟಿ. ಮಾಣಿಕ್ಯಯಲ ರಾವ್ ಅವರು ಕೂಡ ಆಂಧ್ರದ ವಿಧಾನಸಭಾಧ್ಯಕ್ಷರಿಗೆ ರಾಜೀನಾಮೆ ಕೊಟ್ಟಿದ್ದರು.
ನಂತರ ಎನ್ಡಿಎ ಸಖ್ಯ ತೊರೆಯಲು ಮುಂದಾದ ಟಿಡಿಪಿ, ತನ್ನ ಪಕ್ಷದ ಮುಖಂಡರಿಂದ ರಾಜೀನಾಮೆ ಕೊಡಿಸಿತು. ಕೇಂದ್ರದಲ್ಲಿ ವಿಮಾನಯಾನ ಸಚಿವರಾಗಿದ್ದ ಅಶೋಕ್ ಗಜಪತಿರಾಜು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವರಾಗಿದ್ದ ವೈ.ಎಸ್.ಚೌಧರಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದರು. ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಸಿಎಂ ಚಂದ್ರಬಾಬು ನಾಯ್ಡು ಆರಂಭದಿಂದಲೂ ಒತ್ತಾಯಿಸಿದ್ದರು. ಅದಕ್ಕೆ ಕೇಂದ್ರವು ಮಣಿದಿರಲಿಲ್ಲ. ಇದರಿಂದ ಅಸಮಾಧಾನಗೊಂಡು ಟಿಡಿಪಿಯು ಬಿಜೆಪಿ ಜೊತೆಗಿನ ಮೈತ್ರಿ ಕಡಿದುಕೊಳ್ಳುವ ನಿರ್ಧಾರಕ್ಕೆ ಬಂದಿತ್ತು.
ಮೊದಲಿಂದಲೂ ಇಂಥದ್ದೊಂದು ಸಾಧ್ಯತೆ ಇದ್ದೇ ಇತ್ತಾದರೂ ಮೈತ್ರಿ ಕಡಿದುಕೊಳ್ಳುವ ನಿರ್ಧಾರವನ್ನು ಸಿಎಂ ಚಂದ್ರಬಾಬು ನಾಯ್ಡು ಸ್ವಲ್ಪ ತಡವಾಗಿ ಪ್ರಕಟಿಸಿದರು. ಮೊದಲೇ ಟಿಡಿಪಿ ಸಂಸದರೊಂದಿಗೆ ಸಭೆಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಆಂಧ್ರಕ್ಕೆ ವಿಶೇಷ ಸ್ಥಾನಮಾನ ನೀಡುವ ಬೇಡಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದರು ಎನ್ನಲಾಗಿತ್ತು. ಈ ಘಟನೆಯು ಟಿಡಿಪಿಯ ದಿಢೀರ್ ನಿರ್ಧಾರ ಪ್ರಕಟಕ್ಕೆ ಕಾರಣವಾಗಿರಬಹುದು ಎಂದು ಕೂಡ ಅಂದಾಜಿಸಲಾಗಿತ್ತು.
ದೇಶದ ರಾಜಧಾನಿ ನವದೆಹಲಿಯನ್ನು ಮೀರಿಸುವಂತೆ ಆಂಧ್ರದ ನೂತನ ರಾಜಧಾನಿ ಅಮರಾವತಿಯನ್ನು ಕಟ್ಟಲು ನೆರವಾಗುತ್ತೇವೆಂದು ತಿರುಪತಿಯಲ್ಲಿ ಪ್ರಧಾನಿ ಮೋದಿ ಭರವಸೆ ನೀಡಿದ್ದರು. ಆದರೆ, ಅಮರಾವತಿ ನಗರ ಅಭಿವೃದ್ಧಿಗೆ ಕೇಂದ್ರ ಕೊಟ್ಟಿದ್ದು ಕೇವಲ 2,500 ಕೋಟಿ ರೂ ಮಾತ್ರ. ಈ ಹಣದಿಂದ ರಾಜಧಾನಿ ನಿರ್ಮಿಸಲು ಸಾಧ್ಯವೇ? ಅಮರಾವತಿ ನಗರಕ್ಕೆ ಬೇಕಿರೋದು ಏನಿಲ್ಲವೆಂದರೂ 42 ಸಾವಿರ ಕೋಟಿ ಎಂದು ಸಿಎಂ ನಾಯ್ಡು ಈಗಲೂ ಕೇಂದ್ರದ ವಿರುದ್ಧ ಕುಟುಕುತ್ತಿದ್ದಾರೆ.
ಈ ವಿಚಾರದಲ್ಲಿ ಕೇಂದ್ರದ ವಿರುದ್ಧ ಮುಗಿಬಿದ್ದಿರುವ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಇದೀಗ ದೆಹಲಿಯಲ್ಲೇ ಪ್ರತಿಭಟನೆಗೆ ಸಿದ್ಧತೆ ನಡೆಸಿದ್ದಾರೆ. ಬಜೆಟ್‌ನಲ್ಲಿಯೂ ಆಂಧ್ರಕ್ಕೆ ವಿಶೇಷ ಸ್ಥಾನಮಾನ ಸಿಗದ ಹಿನ್ನೆಲೆಯಲ್ಲಿ ತಮ್ಮ ರಾಜ್ಯದ ಎಲ್ಲಾ ಜನಪ್ರತಿನಿಧಿಗಳನ್ನು ಒಗ್ಗೂಡಿಸಿ ಹೋರಾಟಕ್ಕೆ ಮುಂದಾಗಿದ್ದಾರೆ. ಇದಕ್ಕಾಗಿಯೇ ದಕ್ಷಿಣ ಕೇಂದ್ರ ರೈಲ್ವೆಯ 20 ಬೋಗಿಗಳಿರುವ ಎರಡು ರೈಲುಗಳನ್ನು ಮುಂಗಡವಾಗಿ ಕಾಯ್ದಿರಿಸಲಾಗಿದೆ. ಆಂಧ್ರ ಪ್ರದೇಶ ಸರಕಾರವೇ ಇದಕ್ಕೆ ಹಣ ನೀಡಿದ್ದು ಸಾಮಾನ್ಯ ಆಡಳಿತ ಇಲಾಖೆ 1.12 ಕೋಟಿ ರೂಪಾಯಿಗಳನ್ನು ಪಾವತಿಸಿದೆ ಎನ್ನಲಾಗಿದೆ.