ಆಪರೇಷನ್ ಕಮಲಕ್ಕೆ ಬಿಜೆಪಿಗೆ ಹಣ ಎಲ್ಲಿಂದ ಬಂತು: ದಿನೇಶ್ ಗುಂಡೂರಾವ್

ಬೆಂಗಳೂರು, ಫೆ.10- ಬಿಜೆಪಿ ಆಪರೇಷನ್ ಕಮಲವನ್ನು ತೀವ್ರಗೊಳಿಸಿದೆ. ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಸೆಳೆಯಲು 900 ಕೋಟಿಗಳಷ್ಟು ಹಣ ವ್ಯಯಿಸುತ್ತಿದೆ.ಈ ಹಣ ಎಲ್ಲಿಂದ ಬಂತು, ಈ ಅನೈತಿಕ ವ್ಯವಹಾರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಖಾರವಾಗಿ ಪ್ರಶ್ನಿಸಿದ್ದಾರೆ.

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡುವ ಹಿನ್ನೆಲೆಯಲ್ಲಿ ಹುಬ್ಬಳ್ಳಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಪ್ರಶ್ನೆಗಳಿಗೆ ಉತ್ತರ ನೀಡಬೇಕೆಂದು ಪತ್ರಿಕಾಗೋಷ್ಠಿಯಲ್ಲಿಂದು ಹೇಳಿದರು.

ನಾನು ತಿನ್ನುವುದಿಲ್ಲ, ತಿನ್ನಲು ಬಿಡುವುದಿಲ್ಲ ಎಂದು ಹೇಳಿರುವ ಪ್ರಧಾನಮಂತ್ರಿಯವರು ಕರ್ನಾಟಕದಲ್ಲಿ ಬಿಜೆಪಿ ನಡೆಸುತ್ತಿರುವ ಆಪರೇಷನ್ ಕಮಲಕ್ಕೆ ಹಣ ಎಲ್ಲಿಂದ ಬಂತು.ನೈತಿಕತೆ ಬಗ್ಗೆ ಮಾತನಾಡುವ ನೀವು ನಿಮ್ಮ ಪಕ್ಷಗಳ ಅನೈತಿಕ ವ್ಯವಹಾರಗಳ ಬಗ್ಗೆ ಏನು ಹೇಳುತ್ತೀರ ಎಂದು ಪ್ರಶ್ನಿಸಿದ್ದಾರೆ.

ಶಾಸಕರನ್ನು ಸೆಳೆಯುವ ಸಲುವಾಗಿ ಬಿ.ಎಸ್.ಯಡಿಯೂರಪ್ಪ ಅವರು ಹಣದ ಆಮಿಷ ಒಡ್ಡಿದ್ದಾರೆ. ಈ ಕುರಿತು ಮಾತನಾಡಿದ್ದಾರೆ ಎನ್ನಲಾದ ಆಡಿಯೋದಲ್ಲಿ ನ್ಯಾಯಾಂಗದ ಮೇಲೆ, ಪ್ರಧಾನಿಯಾದ ನಿಮ್ಮ ಮೇಲೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಯಾವುದೇ ಕ್ರಮ ಇರಲಿ, ಖಂಡಿಸುವ ಪ್ರಯತ್ನವನ್ನೂ ಮಾಡಿಲ್ಲ. ಇಡೀ ರಾಜ್ಯ ಬರದಿಂದ ತತ್ತರಿಸಿದ್ದು, 8434 ಕೋಟಿ ಬರ ಪರಿಹಾರಕ್ಕೆ ಆರ್ಥಿಕ ನೆರವು ನೀಡಬೇಕೆಂದು ರಾಜ್ಯ ಸರ್ಕಾರ ಬೇಡಿಕೆ ಸಲ್ಲಿಸಿದ್ದರೂ ಕೇವಲ 900 ಕೋಟಿ ರೂ.ಬಿಡುಗಡೆ ಮಾಡಿದ್ದೀರಿ.ಅದೇ ಪಕ್ಕದ ಮಹಾರಾಷ್ಟ್ರ ರಾಜ್ಯಕ್ಕೆ 4714 ಕೋಟಿ ರೂ.ಬಿಡುಗಡೆ ಮಾಡಿ ರಾಜ್ಯದ ಬಗ್ಗೆ ಮಲತಾಯಿ ಧೋರಣೆ ಅನುಸರಿಸಿದ್ದೀರ ಎಂದು ಪ್ರಶ್ನೆಗಳ ಸುರಿಮಳೆಗೈದರು.

ನಿರಂತರ ಬರಗಾಲದಿಂದ ತತ್ತರಿಸಿರುವ ರಾಜ್ಯಕ್ಕೆ ಬರೆ ಎಳೆಯುವಂತೆ ಉದ್ಯೋಗಖಾತ್ರಿ ಯೋಜನೆಯಡಿ ನಮ್ಮ ಪಾಲಿನ ಕಾನೂನುಬದ್ಧ 2000 ಕೋಟಿ ರೂ.ಬಾಕಿ ಹಣವನ್ನು ಎರಡು ವರ್ಷಗಳಿಂದ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರ ಹಲವಾರು ಬಾರಿ ಮನವಿ ಮಾಡಿದರೂ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಆರೋಪಿಸಿದರು.

ಧಾರವಾಡದಲ್ಲಿ ಐಐಟಿ ಸ್ಥಾಪನೆ ಮಾಡಲು ಹಿಂದಿನ ನಮ್ಮ ಸರ್ಕಾರ ಬಹಳಷ್ಟು ಶ್ರಮ ವಹಿಸಿತ್ತು. 500 ಎಕರೆ ಜಾಗವನ್ನು ಉಚಿತವಾಗಿ ಕೊಡುವ ಮುಖಾಂತರ ಐಐಟಿ ತರಲು ಹತ್ತಾರು ಪತ್ರಗಳನ್ನು ಬರೆದು ಛಲ ಬಿಡದ ತ್ರಿವಿಕ್ರಮನಂತೆ ಆರ್.ವಿ.ದೇಶಪಾಂಡೆ ಅವರು ಶ್ರಮಿಸಿದ್ದರು.ರಾಜ್ಯ ಸರ್ಕಾರದ ಈ ಕ್ರಮವನ್ನು ತಾವು ಮರೆತದ್ದು ಎಷ್ಟು ಸರಿ. ರಫೇಲ್ ಗುತ್ತಿಗೆಯನ್ನು ರಿಲಾಯನ್ಸ್‍ಗೆ ನೀಡಿ ಎಚ್‍ಎಎಲ್ ನಿರ್ಲಕ್ಷ್ಯ ಮಾಡಿ ಸ್ವಾರ್ಥ ನೀತಿಯಿಂದ ರಾಜ್ಯದ ಶ್ರಮ ಜೀವಿಗಳಿಗೆ ಒದಗಬಹುದಾದ ಉದ್ಯೋಗ ವಂಚಿಸಿದ್ದೀರಿ.

ಯುನೆಸ್ಕೋದಿಂದಲೇ ವಿಶ್ವ ಪಾರಂಪರಿಕ ತಾಣ ಎಂದು ಘೋಷಿಸಲ್ಪಟ್ಟಿರುವ ಹಂಪಿಯನ್ನು ಅಭಿವೃದ್ಧಿಪಡಿಸಲು ಪಾರಂಪರಿಕ ನಗರ ಅಭಿವೃದ್ಧಿ ಎಂದು ಘೋಷಿಸಿದ್ದರೂ ಇಲ್ಲಿಯವರೆಗೆ ಅಭಿವೃದ್ಧಿ ಸಂಬಂಧ ಯಾವುದೇ ಕ್ರಮ ಕೈ ಗೊಂಡಿಲ್ಲ ಎಂದು ಪ್ರಶ್ನಿಸಿರುವ ದಿನೇಶ್ ಗುಂಡೂರಾವ್ ಪ್ರಧಾನಿಯವರು ಇದಕ್ಕೆ ಸೂಕ್ತ ಉತ್ತರ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ