
ಬೆಂಗಳೂರು, ಫೆ.9- ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡಿಸಿದ ಬಜೆಟ್ನಲ್ಲಿ ಪೂರಕ ಅನುದಾನ ನೀಡುವ ಮೂಲಕ ಭರಪೂರ ಕೊಡುಗೆ ನೀಡಿದ್ದಾರೆ ಎಂದು ಬಿಡಿಎ ಅಧ್ಯಕ್ಷ ಹಾಗೂ ಶಾಸಕ ಎಸ್.ಟಿ.ಸೋಮಶೇಖರ್ ಸಂತಸ ವ್ಯಕ್ತಪಡಿಸಿದ್ದಾರೆ.
ಹೆಮ್ಮಿಗೆಪುರ ವಾರ್ಡ್ನ ಗಾಣಿಗರಪಾಳ್ಯದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಂಗನವಾಡಿ ಕೊಠಡಿಯನ್ನು ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಕ್ಷೇತ್ರ ವ್ಯಾಪ್ತಿಯಲ್ಲಿನ ಹಲವಾರು ಅಭಿವೃದ್ಧಿ ಕಾಮಾಗಾರಿಗೆ ಬಜೆಟ್ನಲ್ಲಿ ಅನುದಾನ ಒದಗಿಸಲು ಚಿಂತನೆ ನಡೆಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ದೇಶದ ಪ್ರಗತಿಯಲ್ಲಿ ಶಿಕ್ಷಣ ಮಹತ್ವದ ಪಾತ್ರವಹಿಸುವುದರಿಂದಶೈಕ್ಷಣಿಕ ಪ್ರಗತಿಗೆ ಎಲ್ಲಾ ರೀತಿಯ ಸಹಕಾರ ನೀಡಿ ಅಕ್ಷರ ವಂಚಿತ ಸಮುದಾಯದ ಎಳ್ಗೆಗೆಬದ್ಧರಾಗಿ ಕಾರ್ಯನಿರ್ವಹಿಸಲಾಗುತ್ತದೆ ಎಂದರು.
ಪಾಲಿಕೆ ಸದಸ್ಯರಾದ ಆರ್ಯ ಶ್ರೀನಿವಾಸ್ ಮಾತನಾಡಿ, ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಿಗೆ ಇರುವ ಕೀಳಿರಿಮೆಯನ್ನು ತೊಡೆದುಹಾಕಲು ಸರ್ಕಾರಿ ಶಾಲೆಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿ ಮೂಲಭೂತ ಸೌಕರ್ಯ ಒದಗಿಸುವ ಜೊತೆಗೆ ಗುಣಮಟ್ಟದ ಶಿಕ್ಷಣ ದೊರಕಿಸಿಕೊಡಲು ಎಲ್ಲಾ ರೀತಿಯ ಪ್ರೋತ್ಸಹ ನೀಡಲಾಗುವುದು ಎಂದರು.
ವಾರ್ಡ್ ವ್ಯಾಪ್ತಿಯಲ್ಲಿ ಶಾಸಕರ ಸಹಕಾರದಲ್ಲಿ ರಸ್ತೆ ಅಭಿವೃದ್ಧಿ ಹಾಗೂ ಆದ್ಯತೆ ಮೇರೆಗೆ ಬಡಾವಣೆಗಳಲ್ಲಿ ನಾಗರಿಕರ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ತಿಳಿಸಿದರು.
ಕೆಂಗೇರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಾರ್ಕಂಡಯ್ಯ, ಅಭಿಯಂತರ ಪ್ರದೀಪ್, ಮುಖಂಡರಾದ ಸಂಪಂಗಿ, ಪ್ರದೀಪ್, ಶಿವಕುಮಾರ್, ರಾಜೇಶ್, ಪ್ರಶಾಂತ್, ಹನುಮಂತರಾಜು, ರಾಣಿ, ನಾರಾಯಣಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.