ಮದ್ದೂರು,ಫೆ.9- ನನ್ನೊಂದಿಗೆ ಕಾಂಗ್ರೆಸ್ ಪಕ್ಷದಲ್ಲಿದ್ದವರೆಲ್ಲ ಬಿಜೆಪಿ ಪಕ್ಷಕ್ಕೆ ಬರಬೇಕೆನ್ನುವುದು ನನ್ನ ಆಸೆ ಎಂದು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ತಿಳಿಸಿದ್ದಾರೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮಂಡ್ಯ ಕಾರ್ಯಕರ್ತರ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಮುಂಬರುವ ಲೋಕಸಭಾ ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಕಾರ್ಯಕರ್ತರ ಪಾತ್ರ ಗಣನೀಯವಾಗಿದೆ. ಈ ಹಿನ್ನೆಲೆಯಲ್ಲಿ ಕಾರ್ಯಕರ್ತರನ್ನು ಹುರಿದುಂಬಿಸಿ ಲೋಕಸಭಾ ಚುನಾವಣೆಗೆ ಅಣಿಗೊಳಿಸಲಾಗುತ್ತಿದೆ ಎಂದರು.
ನನ್ನೊಂದಿಗೆ ಕಾಂಗ್ರೆಸ್ ಪಕ್ಷದಲ್ಲಿದ್ದವರೆಲ್ಲಾ ಬಿಜೆಪಿ ಪಕ್ಷ ಸೇರ್ಪಡೆಯಾಗಬೇಕೆಂಬುದು ತಮ್ಮ ಆಸೆಯಾಗಿದೆ. ಹಾಗಾಗಿ ಈ ಹಿಂದೆ ನನ್ನೊಂದಿಗಿದ್ದ ಬೆಂಬಲಿಗರ ಜೊತೆ ನಿರಂತರವಾಗಿ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.
ಸುಮಲತಾ ಅವರು ಲೋಕಸಭಾ ಚುನಾವಣೆಗೆ ನಿಲ್ಲುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಸ್ಥಳೀಯ ನಾಯಕರು ಅದನ್ನು ತೀರ್ಮಾನ ಮಾಡಬೇಕಾಗುತ್ತದೆ ಎಂದು ಹೇಳಿದರು.
ಬಿಜೆಪಿ ಸೇರಿದ ನಂತರ ಸಾಕಷ್ಟು ದಿನ ಸಕ್ರಿಯ ರಾಜಕಾರಣದಿಂದ ದೂರವುಳಿದಿದ್ದ ಎಸ್.ಎಂ.ಕೃಷ್ಣ ಅವರು, ಲೋಕ ಸಭಾ ಚುನಾವಣಾ ಪ್ರಚಾರದ ಅಖಾಡಕ್ಕೆ ಧುಮುಕಿದ್ದಾರೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು. ದೇಶದಲ್ಲಿ ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರಬೇಕೆಂದು ಎಸ್.ಎಂ.ಕೃಷ್ಣ ಹೇಳಿದ್ದರು.
ಕಳೆದವಾರ ಕೋಲಾರದಲ್ಲಿ ನಡೆದ ಎಂ.ವಿ.ಕೃಷ್ಣಪ್ಪ ಅವರ ಶತಮಾನೋತ್ಸವ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಮಾತುಕತೆ ನಡೆಸಿದ್ದು, ಒಂದೇ ವೇದಿಕೆಯಲ್ಲಿ ಅಕ್ಕ ಪಕ್ಕ ಕುಳಿತಿದ್ದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.