ಮಹೇಶ್ ಕುಮಟಳ್ಳಿ ನಾಪತ್ತೆಯಾಗಿದ್ದಾರೆ, ಹುಡುಕಿಸಿ ಕೊಡಿ: ಹೈಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ

ಬೆಂಗಳೂರು: ಕಾಂಗ್ರೆಸ್ ಅತೃಪ್ತ ಶಾಸಕರ ಹೈಡ್ರಾಮಾದ ನಡುವೆ ಮೊನ್ನೆ ಹೈಕೋರ್ಟ್​​ನಲ್ಲಿ ಇಂಟರೆಸ್ಟಿಂಗ್ ಮೂಡಿಸುವ ಒಂದು ಅರ್ಜಿ ಸಲ್ಲಿಕೆಯಾಗಿದೆ. ಪ್ರಮೋದ್ ಹಿರೇಮನಿ ಎಂಬ ಕಾಂಗ್ರೆಸ್ ಕಾರ್ಯಕರ್ತ ಹೈಕೋರ್ಟ್​ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದು, ತಮ್ಮ ಶಾಸಕ ಮಹೇಶ್ ಕುಮಟಳ್ಳಿ ಅವರು ಹುಡುಕಿಕೊಡುವಂತೆ ಮನವಿ ಮಾಡಿದ್ದಾರೆ. ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಅವರು ಮಹೇಶ್ ಕುಮಟಳ್ಳಿ ಅವರನ್ನು ಅಪಹರಣ ಮಾಡಿರಬಹುದು ಎಂದು ಯೂಥ್ ಕಾಂಗ್ರೆಸ್​ನ ಕಾರ್ಯದರ್ಶಿಯೂ ಆಗಿರುವ ಪ್ರಮೋದ್ ಹಿರೇಮನಿ ಶಂಕಿಸಿದ್ದಾರೆ. ಅಲ್ಲದೆ, ಅಥಣಿ ಪೊಲೀಸ್ ಠಾಣೆಯಲ್ಲಿ ತಾವು ದೂರು ನೀಡಿದರೂ ಏನೂ ಕ್ರಮ ಕೈಗೊಂಡಿಲ್ಲ. ತಾವು ಸೂಕ್ತ ತನಿಖೆ ನಡೆಸಿ ತಮ್ಮ ಶಾಸಕರನ್ನು ಹುಡುಕಿಕೊಡಿಸಬೇಕೆಂದು ಪ್ರಮೋದ್ ಹಿರೇಮನಿ ಪರವಾಗಿ ವಕೀಲ ಎನ್.ಪಿ. ಅಮೃತೇಶ್ ಅವರು ಉಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಪ್ರಮೋದ್ ಹಿರೇಮನಿ ಅವರು ಕಳೆದ ಬಾರಿಯ ಚುನಾವಣೆಯಲ್ಲಿ ಮಹೇಶ್ ಕುಮಟಳ್ಳಿ ಪರ ಸಾಕಷ್ಟು ಕೆಲಸ ಮಾಡಿದ್ದು, ಅವರ ಆಪ್ತರಲ್ಲೊಬ್ಬರೆನಿಸಿದ್ದಾರಂತೆ. ಆದರೆ, ಮಹೇಶ್ ಕುಮಟಳ್ಳಿ ಅವರಿಗೆ ರಮೇಶ್ ಜಾರಕಿಹೊಳಿ ಅವರಿಂದ ಸಾಕಷ್ಟು ಕಿರುಕುಳವಾಗುತ್ತಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಒತ್ತಡ ಹೇರಲಾಗುತ್ತಿದೆ ಎಂದು ಈ ಅರ್ಜಿಯಲ್ಲಿ ದೂರಲಾಗಿದೆ.

ಮಹೇಶ್ ಕುಮಟಳ್ಳಿ ಅವರು ತಮ್ಮೊಂದಿಗೆ ಈ ವಿಚಾರದ ಬಗ್ಗೆ ಮಾತನಾಡಿದ್ದು, ಆತಂಕ ತೋಡಿಕೊಂಡಿದ್ದುಂಟು. ರಾಜೀನಾಮೆ ನೀಡುವಂತೆ ರಮೇಶ್ ಜಾರಕಿಹಳಿ ಬಲವಂತಪಡಿಸುತ್ತಿದ್ಧಾರೆಂದು ತಮ್ಮ ಶಾಸಕರು ಹೇಳಿಕೊಂಡಿದ್ದರು. ತಾವು ಅದಕ್ಕೆಲ್ಲಾ ಭಯಪಡಬೇಡಿ, ತಮ್ಮ ಕುಟುಂಬದ ರಕ್ಷಣೆಗೆ ತಾವಿದ್ದೀವಿ ಎಂದು ಭರವಸೆ ನೀಡಿದ್ದೆ ಎಂದು ಪ್ರಮೋದ್ ಹಿರೇಮನಿ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.

ತಮ್ಮ ಶಾಸಕ ಮಹೇಶ್ ಕುಮಟಳ್ಳಿ ಅವರು ಮುಂಬೈನ ಹೋಟೆಲ್​ವೊಂದರಲ್ಲಿ ರಮೇಶ್ ಜಾರಕಿಹೊಳಿ ಜೊತೆ ಇದ್ದಾರೆಂದು ಮಾಧ್ಯಮಗಳಲ್ಲೆಲ್ಲಾ ವರದಿಗಳಾಗುತ್ತಿವೆ. ಮಹೇಶ್ ಕುಮಟಳ್ಳಿ ಅವರನ್ನು ರಮೇಶ್ ಜಾರಕಿಹೊಳಿ ಅವರೇ ಅಪಹರಿಸಿ ಗೃಹ ಬಂಧನದಲ್ಲಿಟ್ಟಿರಬಹುದೆಂಬ ಅನುಮಾನವಿದೆ ಎಂದು ಪ್ರಮೋದ್ ಹಿರೇಮನಿ ದೂರಿದ್ದಾರೆ.

ಆದರೆ, ಇವತ್ತು ಮಹೇಶ್ ಕುಮಟಳ್ಳಿ ಅವರು ಮಾತನಾಡಿದ್ದರೆನ್ನಲಾದ ಆಡಿಯೋವೊಂದು ಮಾಧ್ಯಮಗಳಿಗೆ ಸಿಕ್ಕಿದೆ. ಇದರಲ್ಲಿ ಮಹೇಶ್ ಕುಮಟಳ್ಳಿ ಅವರು ತಮಗೆ ಪಕ್ಷ ನಿಷ್ಠೆಗಿಂತ ಸ್ವಾಮಿ ನಿಷ್ಠೆ ಮುಖ್ಯ. ರಮೇಶ್ ಜಾರಕಿಹೊಳಿ ಅವರಿಗೆ ವಿಶ್ವಾಸದ್ರೋಹ ಮಾಡುವುದಿಲ್ಲ. ತಮಗೇನಾದರೂ ಪರವಾಗಿಲ್ಲ, ಅವರು ಹೇಳಿದಂತೆ ಕೇಳುತ್ತೇನೆ ಎಂದು ಮಹೇಶ್ ಕುಮಟಳ್ಳಿ ಈ ಧ್ವನಿಮುದ್ರಿಕೆಯಲ್ಲಿ ಮಾತನಾಡಿರುವುದು ತಿಳಿದುಬಂದಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ