ಹುಬ್ಬಳ್ಳಿ,ಫೆ.9-ಆಡಿಯೋ ಬಿಡುಗಡೆ ಮಾಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಐಸ್ಕ್ಯಾಂಡಿ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರೊಬ್ಬರನ್ನು ನಮ್ಮ ಪಕ್ಷಕ್ಕೆ ಕರೆತರಲು ಹಣದ ಆಮಿಷ ನೀಡಲಾಗಿದೆ ಎಂಬ ಆಡಿಯೋ ಬಿಡುಗಡೆ ಮಾಡಿರುವುದರಲ್ಲಿ ಕುಮಾರಸ್ವಾಮಿ ತಲೀನರಾಗಿದ್ದರು. ಹಾಗಾಗಿ ಅವರಿಗೆ ಬಜೆಟ್ ಮಂಡನೆ ಮಾಡುವ ಬಗ್ಗೆ ಅಷ್ಟು ಗಮನವಿರಲಿಲ್ಲ ಎಂದು ಟೀಕಿಸಿದರು.
ಕುಮಾರಸ್ವಾಮಿ ಮಂಡನೆ ಮಾಡಿರುವ ಬಜೆಟ್ ಜನಪರವೂ ಇಲ್ಲ. ರೈತ ಪರವೂ ಇಲ್ಲ. ಇದೊಂದು ಐಸ್ಕ್ಯಾಂಡಿ ಬಜೆಟ್ ಆಗಿದ್ದು, ಯಾವುದೇ ದೂರದೃಷ್ಟಿಯಿಲ್ಲ. ಕೇವಲ ನಾಮಕಾವಸ್ಥೆಗೆ ಬಜೆಟ್ ಮಂಡನೆಯಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವ ಯಾವುದೇ ಪ್ರಯತ್ನವನ್ನು ನಾವು ನಡೆಸಿಲ್ಲ. ಕಾಂಗ್ರೆಸ್-ಜೆಡಿಎಸ್ನಲ್ಲಿರುವವರೇ ಸರ್ಕಾರ ಉರುಳಿಸಲು ಷಡ್ಯಂತ್ರ ನಡೆಸುತ್ತಿದ್ದಾರೆ. ಅಲ್ಲಿ ನಡೆಯುತ್ತಿರುವ ಬೆಳವಣಿಗೆಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವ್ಯಾರು ರಾಜಕೀಯ ಸನ್ಯಾಸಿಗಳಲ್ಲ. ಸಮ್ಮಿಶ್ರ ಸರ್ಕಾರ ಬಿದ್ದು ಹೋದರೆ ದೊಡ್ಡ ಪಕ್ಷವಾಗಿರುವ ಬಿಜೆಪಿ ಸರ್ಕಾರ ರಚನೆ ಮಾಡಲು ಸಿದ್ಧವಿದೆ. ಯಾವುದೇ ಅತೃಪ್ತ ಶಾಸಕರು ನಮ್ಮ ಸಂಪರ್ಕದಲ್ಲಿ ಇಲ್ಲ. ಆಪರೇಷನ್ ಕಮಲ ಎಂಬುದು ಕಟ್ಟುಕಥೆ ಎಂದು ಹೇಳಿದರು.