
ಬೆಂಗಳೂರು, ಫೆ.9- ನ್ಯೂ ಕಬಡ್ಡಿ ಫೆಡರೇಶನ್ ವತಿಯಿಂದ ಫೆ.13ರಿಂದ 15ರವರೆಗೆ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಆಯ್ಕೆ ಪ್ರಕ್ರಿಯೆಯನ್ನು ಆಯೋಜಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಫೆಡರೇಶನ್ ಪ್ರಧಾನಕಾರ್ಯದರ್ಶಿ ಎಂ.ವಿ.ಪ್ರಸಾದ್ಬಾಬು ಮಾತನಾಡಿ, ಆಯ್ಕೆ ಪ್ರಕ್ರಿಯೆಯು ಚಿಕ್ಕಜಾಲ ಸಮೀಪದ ವಿದ್ಯಾನಗರ ಕ್ರೀಡಾ ಶಾಲೆಯಲ್ಲಿ ನಡೆಯಲಿದೆ.ಏಪ್ರಿಲ್, ಮೇ ತಿಂಗಳಿನಲ್ಲಿ ಇಂಡೋ ಇಂಟರ್ನ್ಯಾಷನಲ್ ಲೀಗ್ ನಡೆಯಲಿದೆ ಎಂದು ಹೇಳಿದರು.
ಕಬಡ್ಡಿ ಕ್ರೀಡೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗೊಳಿಸಲು ಹಾಗೂ ಮುಂದಿನ ಪೀಳಿಗೆಗೆ ಕಬಡ್ಡಿಯನ್ನು ಪರಿಣಾಮಕಾರಿಯಾಗಿ ಉಳಿಸಿಕೊಳ್ಳಲು ಪಂದ್ಯಾವಳಿಯನ್ನು ಆಯೋಜಿಲಾಗುತ್ತಿದೆ.ಇದಕ್ಕಾಗಿ ಆಯ್ಕೆ ಪ್ರಕ್ರಿಯೆಯನ್ನು ಫೆ.15ರೊಳಗೆ ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಪಿಕೆಎಲ್ನಲ್ಲಿ ಕನಿಷ್ಠ 30 ಮಂದಿ ವಿದೇಶಿ ಕಬಡ್ಡಿ ಕ್ರೀಡಾಪಟುಗಳಿಗೂ ಅವಕಾಶ ಕಲ್ಪಿಸಲಾಗಿದ್ದು, ಐಪಿಎಲ್ ಟಿ20 ಕ್ರಿಕೆಟ್ ಮಾದರಿಯಲ್ಲಿ ಬೇರೆ ದೇಶಗಳ ಆಸಕ್ತ ಆಟಗಾರರನ್ನು ಆಯ್ಕೆ ಮಾಡಿಕೊಡಲಾಗುವುದು ಎಂದು ಹೇಳಿದರು.
ಏ.1ರಿಂದ ಮಲೆಷಿಯಾದ ಮೆಲಕಾ ಕಬಡ್ಡಿ ವಿಶ್ವಕಪ್ ಟೂರ್ನಿ ಆಯೋಜಿಸಿದೆ.ನ್ಯೂ ಕಬಡ್ಡಿ ಫೆಡರೇಶನ್ನಿಂದ ಭಾರತ ತಂಡವನ್ನು ಆಯ್ಕೆ ಮಾಡಲಾಗುತ್ತದೆ.37 ಪುರುಷ ಪಟುಗಳು, 26 ಮಹಿಳೆಯರ ತಂಡಗಳು ಪಾಲ್ಗೊಳ್ಳಲಿವೆ. ಒಂದು ಪಂದ್ಯಕ್ಕೆ ಒಬ್ಬರಿಗೆ ತಲಾ ಒಂದು ಲಕ್ಷ ಸಂಭಾವನೆ ನೀಡಲಾಗುವುದು ಎಂದರು.
ಕಬಡ್ಡಿ ಪ್ರಿಮೀಯರ್ ಟೂರ್ನಿಗಳಿಂದ ಬರುವ ಲಾಭದಲ್ಲಿ ಶೇ.20ರಷ್ಟನ್ನು ಆಟಗಾರರಿಗೂ, ಶೇ.10ರಷ್ಟು ಹಳೆಯ ಕಬಡ್ಡಿ ಆಟಗಾರರ ಕಲ್ಯಾಣ ಸಂಘಗಳಿಗೆ ಮತ್ತು ಶೇ.20ರಷ್ಟು ವಿವಿಧ ರಾಜ್ಯಗಳಲ್ಲಿ ಕಬಡ್ಡಿ ಆಟ ಪ್ರಾಯೋಜಕತ್ವಕ್ಕೆ ನೀಡಲಾಗುವುದು ಎಂದು ಎಂ.ವಿ.ಪ್ರಸಾದ್ ಬಾಬು ತಿಳಿಸಿದರು.