ಫೆ.12ರಂದು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಹಕಾರ ಸಂಘ ಬ್ಯಾಂಕ್‍ಗಳ ಧರಣಿ

ಬೆಂಗಳೂರು,ಫೆ.9- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಬ್ಯಾಂಕ್‍ಗಳ ಕ್ಷೇಮಾಭಿವೃದ್ಧಿ ಮಹಾಮಂಡಳ ಇದೇ 12ರಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಧರಣಿ ಹಮ್ಮಿಕೊಂಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಹಾಮಂಡಳದ ರಾಜ್ಯಾಧ್ಯಕ್ಷ ಡಿ.ಎಸ್.ಬಡಗಿಗೌಡ್ರ, ಗ್ರಾಮೀಣ ಪ್ರದೇಶಗಳಲ್ಲಿ ರೈತರ ಕೃಷಿ ಕಾರ್ಮಿಕರ ಬಡಕುಟುಂಬಗಳಿಗೆ ಆರ್ಥಿಕ ನೆರವು, ಪಡಿತರ, ಕೃಷಿಗೆ ಬೇಕಾಗುವಂತಹ ಸಲಕರಣೆ ಹಾಗೂ ಸರ್ಕಾರದಿಂದ ರೈತರಿಗೆ ದೊರೆಯುವ ಸೌಲಭ್ಯಗಳನ್ನು ಒದಗಿಸುತ್ತಿದೆ. ಆದರೆ ನಮಗೆ ಅಂತಹ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾಮಂಡಳದಲ್ಲಿ ಕೆಲಸ ನಿರ್ವಹಿಸುತ್ತಿರುವ ನೌಕರರಿಗೆ ಯಾವುದೇ ರೀತಿಯ ಸೇವಾ ಭದ್ರತೆ, ವೇತನ ಶ್ರೇಣಿ, ಪಿಂಚಣಿ ಮತ್ತು ಇತರೆ ಸೌಲಭ್ಯ ಇಲ್ಲದಿರುವುದರಿಂದ ಇವುಗಳನ್ನು ಒದಗಿಸುವಂತೆ ಒತ್ತಾಯಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಧರಣಿ ನಡೆಸಲಾಗುತ್ತಿದೆ.

ಸರ್ಕಾರಕ್ಕೆ ಹಲವು ಬಾರಿ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಿದ್ದರೂ ಯಾವುದೇ ಸಕಾರಾತ್ಮಕ ಉತ್ತರ ಬಂದಿಲ್ಲ. ಆದ್ದರಿಂದ ಸರ್ಕಾರದ ಮೇಲೆ ಒತ್ತಡ ಹೇರಲು ಫ್ರೀಡಂಪಾರ್ಕಿನಲ್ಲಿ ಧರಣಿ ಹಮ್ಮಿಕೊಳ್ಳಲಾಗಿದೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ