ಬೆಂಗಳೂರು,ಫೆ.9- ಕಾಂಗ್ರೆಸ್ನಲ್ಲಿರುವ ಅನೇಕ ಶಾಸಕರು ಕುಮಾರಸ್ವಾಮಿ ಮುಖ್ಯಮಂತ್ರಿ ಎಂಬುದನ್ನು ಒಪ್ಪುತ್ತಿಲ್ಲ. ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ ಎಂದು ಅನೇಕರು ಹೇಳುತ್ತಿದ್ದಾರೆ. ಇನ್ನು ಕೆಲವು ಶಾಸಕರು ಎಲ್ಲಿದ್ದಾರೆ ಎಂಬುದೇ ಗೊತ್ತಿಲ್ಲ. ಇದನ್ನು ಮರೆಮಾಚಲು ಆಡಿಯೋ ಕಥೆಯನ್ನು ಹೆಣೆದಿದ್ದಾರೆ ಎಂದು ಪಕ್ಷದ ವಕ್ತಾರ ಅಶ್ವಥ್ ನಾರಾಯಣ ದೂರಿದರು.
ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಈಗಿನ ತಂತ್ರಜ್ಞಾನದಲ್ಲಿ ಯಾವ ರೀತಿ ಏನು ಬೇಕಾದರೂ ಸೃಷ್ಟಿಸಬಹುದು.ಇನ್ನೊಬ್ಬರ ಧ್ವನಿಯನ್ನು ಮಿಮಿಕ್ರಿ ಮಾಡುವವರು ಈಗ ಸಾಕಷ್ಟಿದ್ದಾರೆ.ಜನರ ಗಮನವನ್ನು ಬೇರೆಡೆ ಸೆಳೆಯಲು ಇಂತಹ ಕುತಂತ್ರ ಮಾಡಿದ್ದಾರೆ ಎಂದು ಆರೋಪಿಸಿದರು.
ಆಡಿಯೋದಲ್ಲಿರುವುದು ಯಡಿಯೂರಪ್ಪನವರ ಧ್ವನಿ ಅಲ್ಲ ಎಂದು ವಿಧಾನಸಭೆ ಸ್ಪೀಕರ್ ರಮೇಶ್ಕುಮಾರ್ ರಮೇಶ್ಕುಮಾರ್ ಹೇಳಿದ್ದಾರೆ. ಆದರೆ ಕುಮಾರಸ್ವಾಮಿ ಇದು ಯಡಿಯೂರಪ್ಪನವರೇ ನಡೆಸಿರುವ ಅಪರೇಷನ್ ಕಮಲದ ಸಂಭಾಷಣೆ ಎಂದು ಹೇಳುತ್ತಿದ್ದಾರೆ.ಇದರಲ್ಲಿ ಯಾವುದು ಸತ್ಯ, ಯಾವುದು ಸುಳ್ಳು ಎಂದು ಪ್ರಶ್ನಿಸಿದ್ದಾರೆ.
ಆಡಿಯೋದಲ್ಲಿರುವುದು ನನ್ನ ಧ್ವನಿ ಎಂಬುದನ್ನು ಕುಮಾರಸ್ವಾಮಿ ಸಾಬೀತು ಮಾಡಿದರೆ 24 ಗಂಟೆಯೊಳಗೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. ಕುಮಾರಸ್ವಾಮಿ ಮೂಲತಃ ಚಿತ್ರರಂಗದಿಂದ ಬಂದವರು. ಅವರಿಗೆ ಇನ್ನೊಬ್ಬರ ಧ್ವನಿಯನ್ನು ನಕಲು ಮಾಡುವುದು ಚೆನ್ನಾಗಿ ತಿಳಿದಿದೆ ಎಂದು ವ್ಯಂಗ್ಯವಾಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ಉಂಟಾಗುತ್ತಿರುವ ಗೊಂದಲಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ. ಕೆಲವರು ಬಿಜೆಪಿ ಹೆಸರು ಹೇಳಿಕೊಂಡು ಇಂಥ ಷಡ್ಯಂತ್ರ ನಡೆಸುತ್ತಿದ್ದಾರೆ. ಅವರ ಸರ್ಕಾರ ಮತ್ತು ಪಕ್ಷದಲ್ಲಿರುವ ಹುಳುಕುಗಳನ್ನು ಸರಿಪಡಿಸದೆ ನಮ್ಮ ಮೇಲೆ ಗೂಬೆ ಕೂರಿಸುವುದು ಎಷ್ಟು ಸರಿ ಎಂದು ಅಶ್ವಥ್ ನಾರಾಯಣ ಪ್ರಶ್ನೆ ಮಾಡಿದರು.