ಬಜೆಟ್​ಗೂ ಮುನ್ನ ಸಿಎಂ ಕುಮಾರಸ್ವಾಮಿ ಸುದ್ದಿಗೋಷ್ಠಿ; ಆಪರೇಷನ್​ ಕಮಲದ ಆಡಿಯೋ ಬಿಡುಗಡೆ

ಬೆಂಗಳೂರು: ಬಜೆಟ್​ಗೂ ಮುನ್ನ ತುರ್ತು ಪತ್ರಿಕಾಗೋಷ್ಠಿ ಕರೆದಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರತಿಪಕ್ಷ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ ಅವರು ಒಂದು ಕಡೆ ಇಡೀ ದೇಶಕ್ಕೇ ಪಾಠ ಮಾಡುತ್ತಾರೆ. ಆದರೆ ಇಲ್ಲಿ ಅವರ ಪಕ್ಷದ ನಾಯಕರಿಗೇ ಹೇಗೆ ನಡೆದುಕೊಳ್ಳುವುದು ಎಂಬುದು ಗೊತ್ತಿಲ್ಲ. ರಾಜ್ಯಪಾಲರ ಭಾಷಣಕ್ಕೂ ಅವಕಾಶ ಮಾಡದೆ ಇರುವುದು ವಿಧಾನಸಭೆ ಅಧಿವೇಶನದ ಘನತೆಗೆ ತಕ್ಕುದಲ್ಲ ಎಂದು ಅವರು ಹರಿಹೈದರು.

ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಸಂಸತ್​ ಅನ್ನು ಪ್ರಧಾನಿ ನರೇಂದ್ರ ಮೋದಿಗೆ ಪ್ರಜಾಪ್ರಭುತ್ವದ ದೇಗುಲ ಎಂದು ಹೇಳಿದ್ದರು. ಪ್ರಧಾನಿ ಮೋದಿ ಅವರು ಸಂಸತ್ತಿಗೆ ಆಗಮಿಸುವಾಗ ಸಂಸತ್ತಿನ ದ್ವಾರಕ್ಕೆ ತಲೆಬಾಗಿದ್ದು ನನಗೆ ನೆನಪಿದೆ. ಆದರೆ, ನಿನ್ನೆ ಮಾತನಾಡುವಾಗ ಪ್ರಧಾನಿ ಮೋದಿ ಯಾವ ರೀತಿ ಮಾತನಾಡಿದ್ದಾರೆ ಎಂಬುದನ್ನು ಗಮನಿಸಬೇಕು. ಗೌರವಾನ್ವಿತ ಪ್ರಧಾನಿಯಾಗಿ ದೇಶದ ಜನರಿಗೆ ಸುಳ್ಳು ಮಾಹಿತಿ ನೀಡಿದ್ದಾರೆ, ಜನರ ದಾರಿ ತಪ್ಪಿಸುತ್ತಿದ್ದಾರೆ. ಆದರೆ ಅಂದಿನ ಆ ವರ್ತನೆಗೆ ಸೂಕ್ತವಾಗುವಂತೆ ಅವರಿಂದು ವರ್ತಿಸುತ್ತಿದ್ದಾರಾ? ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಹೆಚ್‌ಡಿಕೆ ಅಸಮಧಾನ ವ್ಯಕ್ತಪಡಿಸಿದರು.

ಕಾಂಗ್ರೆಸ್​ ಜೊತೆಗೆ ಮೈತ್ರಿ ಮಾಡಿಕೊಂಡರೆ ಅದು ಆತ್ಮಹತ್ಯೆ ಮಾಡಿಕೊಂಡಂತೆ ಎಂದು ಬಿಜೆಪಿ ಹೇಳಿಕೆ ಕೊಡುತ್ತದೆ. ನಿಮ್ಮ ಜೊತೆ ಮೈತ್ರಿ ಮಾಡಿಕೊಂಡರೆ ಏನು ಸ್ವಾಮಿ? ನಿಮ್ಮ ಜೊತೆಗಿನ ಮೈತ್ರಿಯ ಅನುಭವವೂ ನನಗೆ ಆಗಿದೆ. ನೀವು ನನ್ನ ಕೆರಿಯರ್​ ಮುಗಿಸಲು ಹೊರಟಿದ್ದಿರಿ ಎಂದು ಯಡಿಯೂರಪ್ಪ ವಿರುದ್ಧ ಸಿಎಂ ವಾಗ್ದಾಳಿ ನಡೆಸಿದರು.

ಕರ್ನಾಟಕ ಸರ್ಕಾರದ ರೈತರ ಸಾಲ ಮನ್ನಾ ಯೋಜನೆ ಕುರಿತಂತೆ ನರೇಂದ್ರ ಮೋದಿಯವರು, ಸುಳ್ಳು ಮಾಹಿತಿ ನೀಡುವ ಮೂಲಕ ಲೋಕಸಭೆಯ ದಿಕ್ಕು ತಪ್ಪಿಸಿದ್ದಾರೆ ಎಂದು ಆರೋಪಿಸಿದ ಕುಮಾರಸ್ವಾಮಿ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದ್ದೇನೆ ಎಂದು ಹೇಳಿಕೊಳ್ಳುವ ನರೇಂದ್ರ ಮೋದಿಯವರ ಬಿಜೆಪಿ ಪಕ್ಷ, ಕರ್ನಾಟಕದಲ್ಲಿ ಮಾಡುತ್ತಿರುವುದೇನು ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ಒಂದು ಕಡೆ ಭ್ರಷ್ಟಾಚಾರ ಕಪ್ಪು ಹಣದ ಬಗ್ಗೆ ಮಾತನಾಡುವ ಪ್ರಧಾನಿ ಮೋದಿ, ಮತ್ತೊಂದೆಡೆ ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಮೋದಿ ತಮ್ಮ ಸಹಾಯ ನೀಡುತ್ತಿದ್ದಾರೆ, ನಾನು ಯಾವುದಕ್ಕೂ ಪ್ರತಿಕ್ರಿಯೆ ನೀಡುತ್ತಿರಲಿಲ್ಲ, ಆದರೆ ಇತ್ತೀಚೆಗೆ ನಡೆಯುತ್ತಿರುವ ಕೆಲವು ಬೆಳವಣಿಗೆಗಳು ನಾನು ಸುದ್ದಿಗೋಷ್ಠಿ ನಡೆಯುವಂತೆ ಮಾಡಿವೆ ಎಂದು ಬೇಸರ ವ್ಯಕ್ತ ಪಡಿಸಿದರಲ್ಲದೆ, ಕೇಂದ್ರ ಸಚಿವ ಸದಾನಂದ ಗೌಡ, ದಿ ಗ್ರೇಟ್ ಅಶೋಕ್ ಎನೆಲ್ಲಾ ಮಾತನಾಡಿದ್ದಾರೆ, ನಾವು ವಿಪಕ್ಷದಲ್ಲಿದ್ದೇವೆ, ನಾವು ಸನ್ಯಾಸಿಗಳಲ್ಲ, ನಾವು ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಹೊರಟಿಲ್ಲ ಎಂದು ಯಡಿಯೂರಪ್ಪ ಹೇಳುತ್ತಿದ್ದಾರೆ, ಜನರಿಗೆ ಏನು ಹೇಳಲು ಹೊರಟಿದ್ದಾರೆ. ನಾವು ಅವರಿಗೆ ಸನ್ಯಾಸಿಗಳಾಗಿರಿ ಎಂದು ಹೇಳಿದ್ದೇವೆಯೇ ಎಂದು ಪ್ರಶ್ನಿಸಿದ್ದಾರೆ

ಆಡಿಯೋ ಬಿಡುಗಡೆ:

ದೇವದುರ್ಗ ಶಾಸಕನಿಗೆ ಯಡಿಯೂರಪ್ಪ ಆಮಿಷ ವೊಡ್ಡಿರುವ ಬಗ್ಗೆ ಆಪರೇಷನ್​ ಕಮಲದ ಆಡಿಯೋ ಬಿಡುಗಡೆ ಮಾಡಿದ ಸಿಎಂ ಕುಮಾರಸ್ವಾಮಿ, ಶಾಸಕನ ಮಗ ಶರಣು ಗೌಡನಿಗೆ ಕರೆ ಮಾಡಿ ಅಪ್ಪನನ್ನು ಬಿಜೆಪಿ ಸೇರಿಸುವಂತೆ ಒಪ್ಪಿಸಲು ಬೆಳಗಿನ ಜಾವ ಮೂರುವರೆಗೆ ಮಾತನಾಡಿರುವ ಬಗ್ಗೆ ಮೊಬೈಲ್ ರೆಕಾರ್ಡಿಂಗ್ ಬಿಡುಗಡೆ ಮಾಡಿ ಶಾಕ್ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದೇವದುರ್ಗದ ಶಾಸಕ  ಶಾಸಕ ನಾಗನಗೌಡ ಅವರ ಮಗ ಶರಣು ಗೌಡ ನಿನ್ನೆ ರಾತ್ರಿ 11 ಗಂಟೆಗೆ ಕಾಲ್​ ಮಾಡಿ ಯಡಿಯೂರಪ್ಪ ಮಾತಾಡ್ತಾರೆ ಎಂದು ಹೇಳಿದರು. ಬಿ.ಎಸ್. ಯುಡಿಯೂರಪ್ಪ ನನಗೆ ಮೂರು ಬಾರಿ ಕರೆ ಮಾಡಿದ್ದರು. ನಾನು ಆಗ ಯಾದಗಿರಿಯಲ್ಲಿದ್ದೆ. ತಕ್ಷಣ ದೇವದುರ್ಗದ ಗೆಸ್ಟ್​ಹೌಸ್​ಗೆ ಬನ್ನಿ ಎಂದು ಕರೆದರು. ನಾನು ಆ ಫೋನ್​ ಕಾಲ್​ ಅನ್ನು ಕುಮಾರಸ್ವಾಮಿಯವರಿಗೆ ಕನೆಕ್ಟ್​ ಮಾಡಿದೆ. 50 ಕೋಟಿ ರೂ. ನೀಡಿ ಸ್ಪೀಕರ್ ಅವರನ್ನೇ ಬುಕ್ ಮಾಡಿದ್ದೇವೆ. ದೇಶದ ನ್ಯಾಯಾಧೀಶರನ್ನೇ ಬುಕ್ ಮಾಡಿದ್ದೇವೆ. ಇದನೆಲ್ಲಾ ಅಮಿತ್ ಶಾ ನೋಡಿಕೊಳ್ಳುತ್ತಾರೆ. ನೀವು ಬನ್ನಿ ಎಂದು ಆಮಿಷ ಒಡ್ಡಿದ ಬಗ್ಗೆ ಆರೋಪ ಮಾಡಿದರು. ನಾವು ಮಾತಾಡುತ್ತಿದ್ದದನ್ನೆಲ್ಲ ಕುಮಾರಣ್ಣನೂ ಕೇಳಿಸಿಕೊಳ್ಳುತ್ತಿದ್ದರು. ಇದಕ್ಕೂ ಮುಂಚೆಯೇ ದುಡ್ಡು ಕೊಡುತ್ತೇವೆ ಎಂದು ಆಮಿಷವೊಡ್ಡಿದ್ದರು. ನಾವು ದೇವೇಗೌಡರ ಕುಟುಂಬದವರನ್ನು ಮೂರು ತಲೆಮಾರಿನಿಡ್ನ ಹತ್ತಿರದಿಂದ ನೋಡಿದ್ದೇವೆ ಎಂದರು

ನಮ್ಮ ಪಕ್ಷ ಇವತ್ತಿಗೂ ಜೀವಂತ:
ಸಿಎಂ ಗೋ ಬ್ಯಾಕ್ ಗೋ ಬ್ಯಾಕ್ ಎಂದು ಕೂಗುತ್ತಾರೆ, ನಮ್ಮ ಪಕ್ಷ ಇವತ್ತಿಗೂ ಜೀವಂತವಾಗಿದೆ, ಯಡಿಯೂರಪ್ಪ ನಿನ್ನೆ ರಾತ್ರಿ 12 ಗಂಟೆಗೆ ದೇವದುರ್ಗಕ್ಕೆ ಹೋಗಿದ್ದರು, ನಾನು ಯಾರೋ ನಿಧನಾರಾಗಿದ್ದಾರೆ ಎಂದು ಭಾವಿಸಿದ್ದೆ,  ದೇವದುರ್ಗ ಐಬಿಯಲ್ಲಿ ಯಾವ ಶಾಸಕರಿದ್ದರು ಎಂಬ ಬಗ್ಗೆ ನನಗೆ ಮಾಹಿತಿಯಿದೆ.  2008ರಲ್ಲಿ ಬಿಜೆಪಿ ನಡೆಸಿದ್ದ ಅಪರೇಷನ್ ಕಮಲ ಚಾಳಿಯನ್ನು ಆ ಪಕ್ಷವು ಇನ್ನೂ ಬಿಟ್ಟಿಲ್ಲ ಎಂದು ದೂರಿದ್ದಾರೆ. ಆಪರೇಷನ್​ ಕಮಲ ಬಿಜೆಪಿಯ ಹುಟ್ಟುಗುಣ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ