ನವದೆಹಲಿ: ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ದಿನವೂ ಜಾರೀ ನಿರ್ದೇಶನಾಲಯ ಅಧಿಕಾರಿಗಳಿಂದ ಉದ್ಯಮಿ ರಾಬರ್ಟ್ ವಾದ್ರಾ ವಿಚಾರಣೆ ನಡೆಯಲಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ನಿನ್ನೆಯೇ ತನ್ನ ಗಂಡ ವಾದ್ರಾರನ್ನು ಇಡಿ ತನಿಖಾ ಸಂಸ್ಥೆಗೆ ಕರೆದೊಯ್ದಿದ್ದರು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾವ ರಾಬರ್ಟ್ ವಾದ್ರಾ ಅಕ್ರಮವಾಗಿ ವಿದೇಶದಲ್ಲಿ ಆಸ್ತಿ ಹೊಂದಿದ ಆರೋಪದಡಿ ಜಾರಿ ನಿರ್ದೇಶನಾಲಯದ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಇಂದು ವಿಚಾರಣೆ ಮುಂದುವರೆಯಲಿದ್ದು, ಗಾಂಧೀ ಕುಟುಂಬಕ್ಕೆ ಸಂಕಷ್ಟ ಎದುರಾಗಿದೆ.
ಮೂಲಗಳ ಪ್ರಕಾರ ನಿನ್ನೆ ವಾದ್ರಾರನ್ನು ವಿಚಾರಣೆಗೆ ಒಳಪಡಿಸಿದ್ದ ಇ.ಡಿ ಅಧಿಕಾರಿಗಳು 40ಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿದ್ದರು. ಇದಕ್ಕೆ ವಾದ್ರಾ ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ. ಇದೇ ವೇಳೆ ವಾದ್ರಾ ಪರ ವಕೀಲರು ವಿಚಾರಣೆ ನಡೆಯುವ ಪಕ್ಕದ ಕೊಠಡಿಯಲ್ಲಿದ್ದರು. ಜತೆಗೆ ವಾದ್ರಾ ಅವರನ್ನು ಖುದ್ದು ಪ್ರಿಯಾಂಕಾ ಗಾಂಧಿ ಅವರೇ ಜಾರಿ ನಿರ್ದೇಶನಾಲಯ ಕಚೇರಿ ಬಳಿ ಡ್ರಾಪ್ ಮಾಡಿದ್ದರು. ನಂತರ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಮುಖ್ಯಕಚೇರಿಗೆ ತೆರಳಿದರು. ಎಐಸಿಸಿ ಪ್ರಧಾನ ಕಾರ್ಯದರ್ಶಿಯಾದ ನಂತರ ಪ್ರಿಯಾಂಕಾ ಗಾಂಧಿ ಕಚೇರಿ ಇದೇ ಮೊದಲ ಬಾರಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ.
ಇಡಿ ವಿಚಾರಣೆ ಸಂಬಂಧ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕಾ, “ಏನಾಗಿದೆ ಎಂಬುದು ಪ್ರತಿಯೊಬ್ಬರಿಗೂ ಗೊತ್ತು. ನನ್ನ ಕುಟುಂಬದ ಪರವಾಗಿ ನಾನಿದ್ದೇನೆ,” ಎಂದು ಉತ್ತರಿಸಿದ್ದಾರೆ. ಈ ಮೂಲಕ ಪ್ರಿಯಾಂಕಾ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.
ಈ ಹಿಂದೆ ಇದೇ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಕೋರಿ ವಾದ್ರಾ ದೆಹಲಿ ನ್ಯಾಯಾಲಯದ ಮೆಟ್ಟಿಲೇರಿದಾಗ ನ್ಯಾಯಾಲಯವು ಜಾಮೀನು ಮಂಜೂರು ಮಾಡಿ, ಕೇಂದ್ರ ತನಿಖಾ ಸಂಸ್ಥೆಯ ವಿಚಾರಣೆಗೆ ಸಹಕರಿಸಬೇಕು ಎಂದು ನಿರ್ದೇಶನ ನೀಡಿತ್ತು. ಕಳೆದ ವಾರ ದೆಹಲಿ ನ್ಯಾಯಾಲಯ ರಾಬರ್ಟ್ ವಾದ್ರಾ ಅವರಿಗೆ ಫೆಬ್ರವರಿ 16ರವರೆಗೆ ಮಧ್ಯಂತರ ಜಾಮೀನು ಮಂಜೂರು ಮಾಡಿತ್ತು.
ಅಕ್ರಮ ಹಣದಲ್ಲಿ ಲಂಡನ್ನ ಬ್ರಿಯಾನ್ಸ್ಟನ್ನಲ್ಲಿ ಸುಮಾರು 18 ಕೋಟಿ ಮೌಲ್ಯದ ಆಸ್ತಿ ಖರೀದಿಸಿರುವ ಆರೋಪದಲ್ಲಿ ರಾಬರ್ಟ್ ವಾದ್ರಾ ಸಿಲುಕಿದ್ದಾರೆ. ರಾಬರ್ಟ್ ವಾದ್ರಾ ಇದಷ್ಟೇ ಆಸ್ತಿ ಅಲ್ಲದೇ, ಲಂಡನ್ನಲ್ಲಿ ತಲಾ ನಾಲ್ಕರಿಂದ ಐದು ಮಿಲಿಯನ್ ಮೌಲ್ಯದ ಎರಡು ಮನೆಗಳು ಹಾಗೂ ಆರು ಫ್ಲಾಟ್ಗಳು ಸೇರಿ ಇನ್ನು ಹೆಚ್ಚಿನ ಆಸ್ತಿಯನ್ನು ಹೊಂದಿರುವ ಬಗ್ಗೆ ಮಾಹಿತಿ ಬಂದಿರುವುದಾಗಿ ತನಿಖಾ ಸಂಸ್ಥೆ ಕೋರ್ಟ್ನಲ್ಲಿ ಹೇಳಿತ್ತು.
ರಾಬರ್ಟ್ ವಾದ್ರಾ ವಿಚಾರಣೆ ಬಗ್ಗೆ ಪ್ರತಿಕ್ರಿಯಿಸಿರುವ ಇಡಿ ಅಧಿಕಾರಿ, ಈ ಆಸ್ತಿಯ ಬಗ್ಗೆ ಬಂದು ಮಾಹಿತಿ ನೀಡುವಂತೆ ತಿಳಿಸಿದ್ದೆವು, ಅಷ್ಟೇ ಎಂದು ಹೇಳಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಬರ್ಟ್ ವಾದ್ರಾ, ಇದು ಅನಧಿಕೃತ, ನ್ಯಾಯಸಮ್ಮತವಲ್ಲದ ಮತ್ತು ದುರುದ್ದೇಶಪೂರಿತ ಕ್ರಿಮಿನಲ್ ಮೊಕದ್ದಮೆಗಳು. ಈ ಮೊಕದ್ದಮೆ ಸಂಪೂರ್ಣವಾಗಿ ರಾಜಕೀಯ ಪ್ರೇರಿತವಾದದ್ದು. ಬೇರೆ ಕಾರಣಗಳಿಗಾಗಿ ಇದನ್ನು ಕಾನೂನಿನಡಿ ತರಲಾಗುತ್ತಿದೆ ಎಂದು ಹೇಳಿದ್ದಾರೆ.