ನಾಳೆ ಮೈತ್ರಿ ಸರ್ಕಾರದ ಬಜೆಟ್​​: ಅಗ್ನಿಪರೀಕ್ಷೆಯಲ್ಲಿ ಸಿಎಂ; ಭಾರೀ ನಿರೀಕ್ಷೆಯಲ್ಲಿ ಮತದಾರ!

ಬೆಂಗಳೂರುಲೋಕಸಭೆ ಚುನಾವಣೆ ಸಮೀಸುತ್ತಿದ್ದಂತೆಯೇ ಕಾಂಗ್ರೆಸ್​​-ಜೆಡಿಎಸ್​​ ಸಮ್ಮಿಶ್ರ ಸರ್ಕಾರ ಬಜೆಟ್ ಮಂಡನೆಗೆ ಮುಂದಾಗಿದೆ. ಒಂದೆಡೆ ಇತ್ತ ಸಿಎಂ ಎಚ್​​.ಡಿ ಕುಮಾರಸ್ವಾಮಿ ಅಗ್ನಿಪರೀಕ್ಷೆ ಎದುರಿಸುತ್ತಿದ್ದರೇ; ಇನ್ನೊಂದೆಡೆ ಅತ್ತ ಬಜೆಟ್​​​ ಮೇಲೆ ಜನ ಭಾರೀ ನಿರೀಕ್ಷೆಯಿಟ್ಟಿದ್ದಾರೆ. ಹೀಗಾಗಿಯೇ ಮತದಾರನ ನಿರೀಕ್ಷೆಯನ್ನು ನಿಜ ಮಾಡಲೆಂದು ಮೈತ್ರಿ ಸರ್ಕಾರ ಬಜೆಟ್​​ ವೇಳೆ ಜನಪ್ರಿಯ ಯೋಜನೆಗಳನ್ನು ಘೋಷಿಸಲಿದೆ ಎನ್ನಲಾಗಿದೆ. ಅಲ್ಲದೇ ಬಜೆಟ್‍ನಲ್ಲಿ ಶಿಕ್ಷಣ, ಕೃಷಿ, ಆರೋಗ್ಯ, ಗ್ರಾಮೀಣಾಭಿವೃದ್ದಿ, ನೀರಾವರಿ ಕ್ಷೇತ್ರಗಳಿಗೆ ಮೊದಲ ಆದ್ಯತೆ ನೀಡಲು ನಿರ್ಧರಿಸಲಾಗಿದೆ ಎನ್ನುತ್ತಿವೆ ಮೂಲಗಳು.
ರಾಜ್ಯ ಹಣಕಾಸು ಖಾತೆ ಹೊಣೆ ಹೊತ್ತಿರುವ ಸಿಎಂ ಎಚ್​​.ಡಿ ಕುಮಾರಸ್ವಾಮಿ ನಾಳೆ ಸದನದಲ್ಲಿ ಬಜೆಟ್​​ ಮಂಡಿಸಲಿದ್ದಾರೆ. ಸಮ್ಮಿಶ್ರ ಸರ್ಕಾರದ 2ನೇ ಬಜೆಟ್​​ ಇದಾಗಿದ್ದು, ಈ ಬಾರಿ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತಿದೆ. ಕಳೆದ ವರ್ಷ ಎಂಟು ತಿಂಗಳ ಹಿಂದೆ ಮಂಡಿಸಿದ್ದ ಮೊದಲ ಬಜೆಟ್​​ನಲ್ಲಿ ಸಿಎಂ ಕುಮಾರಸ್ವಾಮಿ ರೈತರ ಸಾಲಮನ್ನಾ ಘೋಷಿಸಿದ್ದರು. ಅಂದು ಯಾವ ಕ್ಷೇತ್ರಕ್ಕೆ ಎಷ್ಟು ಪ್ರಾಮುಖ್ಯತೆ ನೀಡಬೇಕೆಂಬ ಸ್ಪಷ್ಟತೆ ಇರಲಿಲ್ಲ. ಇದೀಗ ಸ್ಪಷ್ಟವಾಗಿ ಕೆಲ ಕ್ಷೇತ್ರಗಳಿಗೆ ಮೊದಲ ಆದ್ಯತೆ ನೀಡುತ್ತಿದ್ದು, ಕೃಷಿಗೆ ಸಿಂಹಪಾಲು ದೊರೆಯಲಿದೆ ಎನ್ನಲಾಗುತ್ತಿದೆ.
ಈ ಬಾರಿ ಬಜೆಟ್​​ನಲ್ಲಿ ಆಂತರಿಕ ಸಂಪನ್ಮೂಲ ಕ್ರೋಢೀಕರಣಕ್ಕೂ ಒತ್ತು ನೀಡಲಾಗಿದೆ. ಕೃಷಿ ಕ್ಷೇತ್ರದಲ್ಲಿ ಇಸ್ರೇಲ್ ತಂತ್ರಜ್ಞಾನ ಹೇಗೆ ಬಳಸುವುದು? ಎಂಬ ಮಹತ್ವದ ಯೋಜನೆಯನ್ನು ಮೈತ್ರಿ ಸರ್ಕಾರ ಘೋಷಿಸುವ ಸಾಧ್ಯತೆಯಿದೆ. ಈಗಾಗಲೇ ಕೃಷಿ ಸಚಿವರ ಅಧ್ಯಕ್ಷತೆಯಲ್ಲಿ ಈ ಬಗ್ಗೆ ಸಮಿತಿಯೊಂದನ್ನು ರಚಿಸಿ ವರದಿ ಸಿದ್ದಪಡಿಸಲಾಗಿದೆ. ಹೇಗೆ ತಂತ್ರಜ್ಞಾನ ಬಳಸಬೇಕು; ಯಾವ ರೀತಿ ಅನುಷ್ಠಾನಕ್ಕೆ ತರಬೇಕು; ಎಷ್ಟು ಅನುದಾನ ನೀಡಬೇಕು ಎಂಬುದರ ಬಗ್ಗೆ ಕೂಲಂಕುಷವಾಗಿ ತಿಳಿಸಲಾಗಿದೆ.

ಇನ್ನು ಅಂತರ್ಜಲ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಭೂಮೇಲ್ಮೈ ಭಾಗದ ನೀರನ್ನು ಬಳಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಸುಮಾರು 53 ಸಾವಿರ ಕೋಟಿ ರೂಗಳ ಬೃಹತ್ ಯೋಜನೆ ಘೋಷಿಸುವ ನಿರೀಕ್ಷೆಯಿದೆ. ಹಾಗೆಯೇ ವೃದ್ದಾಪ್ಯ ಮತ್ತು ವಿಕಲಚೇತನ ಸೇರಿದಂತೆ ವಿವಿಧ ವರ್ಗಗಳಿಗೆ ನೀಡುತ್ತಿರುವ ಪಿಂಚಣಿ ಹಣ ಹೆಚ್ಚಿಸುವುದು; ಅಂಗನವಾಡಿ ನೌಕರರ ವೇತನ ಪರಿಷ್ಕರಣೆ; ಕೃಷಿ ವರ್ಗಕ್ಕೆ ವಿಶೇಷ ವಿಮಾ ಸೌಲಭ್ಯ; ರೈತರಿಗೆ ವಿಶೇಷ ವಿಮಾ ನೀಡುವಂತ ಯೋಜನೆಗಳನ್ನು ಸಿಎಂ ಕುಮಾರಸ್ವಾಮಿಯವರು ಘೋಷಿಸಲು ಮುಂದಾಗಿದ್ದಾರೆ.
ಕೇಂದ್ರ ಸರ್ಕಾರಕ್ಕಿಂತ ಮಹತ್ವದ ಯೋಜನೆಗಳು ನೀಡುವುದು; ಪೊಲೀಸ್​ ಸಿಬ್ಬಂದಿಗಳ ವೇತನ ಪರಿಷ್ಕರಣೆ; ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರ ಭಾಗ್ಯದಂತಹ ಹಿಂದಿನ ಸಿದ್ದರಾಮಯ್ಯನ ಸರ್ಕಾರದ ಯೋಜನೆಗಳಿಗೆ ಇನ್ನಷ್ಟು; ಕೃಷಿ ವಲಯವನ್ನು ಬಲಪಡಿಸುವುದು; ರೈತರ ಸಾಲಮನ್ನಾ; ಸರ್ಕಾರಿ ನೌಕರರ 6ನೇ ವೇತನ; ಆರ್ಥಿಕ ಹೊರೆಯನ್ನು ಸರಿದೂಗಿಸಲು ಹೊಸ ಯೋಜನೆ ಉದ್ಘೋಷ ಮಾಡುವ ಸಾಧ್ಯತೆಯಿದೆ.

ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಹೊಸ ಡಯಾಲಿಸಿಸ್ ಸೆಂಟರ್ ಸ್ಥಾಪನೆ; ತಾಲ್ಲೂಕು ಆಸ್ಪತ್ರೆಗಳ ಉನ್ನತೀಕರಣ; ಶಿಕ್ಷಣ ಕ್ಷೇತ್ರದಲ್ಲಿ 1000 ಇಂಗ್ಲೀಷ್ ಮಾಧ್ಯಮ ಶಾಲೆಗಳ ಆರಂಭ; ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗಾಗಿ 500 ಕೋಟಿ ಅನುದಾನ; ದಲಿತ ಸಮುದಾಯಕ್ಕೆ ವಿಶೇಷ ಅನುದಾನ; ಅಲ್ಪಸಂಖ್ಯಾತ ಹಿಂದುಳಿದ ಸಮುದಾಯಕ್ಕೆ ಮಹತ್ವದ ಯೋಜನೆಗಳನ್ನು ಪ್ರಕಟಿಸಲು ಸಿಎಂ ತುದಿಗಾಲಲ್ಲಿ ನಿಂತಿದ್ದಾರೆ.
ಇನ್ನು ಪ್ರತಿಸಲ ಮಂಡನೆಗೆ ಮುನ್ನವೇ ಬಜೆಟ್​​ ಪ್ರತಿ ಸಿಗುತ್ತಿತ್ತು, ಆದರೆ, ಈ ಬಾರಿ ಸಂಪೂರ್ಣ ಮಂಡನೆಯಾಗುವವರೆಗೂ ಬಜೆಟ್​​ ಪ್ರತಿ ಸಿಗುವುದಿಲ್ಲ ಎನ್ನಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ