ಬೆಂಗಳೂರು, ಫೆ.7-ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಿಎಂ.ಸಿದ್ದರಾಮಯ್ಯ ಅವರು, ಬಿಜೆಪಿ ಹಲವಾರು ದಿನಗಳಿಂದಲೂ ಆಪರೇಷನ್ ಕಮಲ ನಡೆಸಿ ಕಾಂಗ್ರೆಸ್ ಶಾಸಕರನ್ನು ಸೆಳೆಯುವ ಪ್ರಯತ್ನ ನಡೆಸುತ್ತಲೇ ಇದೆ.ಆದರೆ ಅದು ಯಶಸ್ವಿಯಾಗಿಲ್ಲ. ಈಗಲೂ ಅದು ಯಶಸ್ವಿಯಾಗುವುದಿಲ್ಲ.
ಸುಮಾರು 20 ಮಂದಿ ಶಾಸಕರಿಗೆ 30 ರಿಂದ 40 ಕೋಟಿ ರೂ. ಹಣ ನೀಡುವುದಾಗಿ ಭರವಸೆ ನೀಡುತ್ತಿದ್ದಾರೆ. ಅಷ್ಟೊಂದು ದುಡ್ಡು ಬಿಜೆಪಿಯವರಿಗೆ ಎಲ್ಲಿಂದ ಬಂತು? ಎಂದು ಅವರು ಪ್ರಶ್ನಿಸಿದರು.
ಆಪರೇಷನ್ ಕಮಲ ನಡೆಸುತ್ತಿರುವ ಕುರಿತಂತೆ ಸ್ಪೀಕರ್ ಅವರಿಗೆ ದೂರು ನೀಡಲು ಬರುವುದಿಲ್ಲ. ಅದು ಸದನದ ಹೊರಗೆ ನಡೆಯುವ ಚಟುವಟಿಕೆಗಳು ಎಂದ ಅವರು, ಬಿಜೆಪಿಯ ಯಾವುದೇ ಆಮಿಷಗಳಿಗೆ ಕಾಂಗ್ರೆಸ್ ಶಾಸಕರು ಜಗ್ಗುವುದಿಲ್ಲ, ಅವರು ಪಕ್ಷ ಬಿಟ್ಟು ಹೋಗುವುದಿಲ್ಲ ಎಂದು ತಿಳಿಸಿದರು.
ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ.ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತದೆ. ಪಕ್ಷದ ಶಿಸ್ತನ್ನು ಉಲ್ಲಂಘಿಸುವ ಶಾಸಕರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬುದನ್ನು ಪರಿಶೀಲಿಸುತ್ತಿದ್ದೇವೆ. ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆ ಕರೆಯಲಾಗಿದೆ. ಸಭೆಯಲ್ಲಿ ಭಾಗವಹಿಸಲು ಎಲ್ಲಾ ಶಾಸಕರು ಇಂದು ಸಂಜೆಯೊಳಗಾಗಿ ಬೆಂಗಳೂರಿಗೆ ಬರುವ ವಿಶ್ವಾಸವಿದೆ.ಒಂದು ವೇಳೆ ಬರದೆ ಇರುವ ಶಾಸಕರ ವಿರುದ್ಧ ಯಾವ ರೀತಿ ಕ್ರಮಕೈಗೊಳ್ಳಬಹುದು ಎಂಬುದನ್ನು ಪರಿಶೀಲಿಸುವುದಾಗಿ ಹೇಳಿದರು.
ಬಿಜೆಪಿಯವರಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಅದಕ್ಕಾಗಿಯೇ ವಿಧಾನಸಭೆ ಅಧಿವೇಶನ ನಡೆಸಲು ಬಿಡದೆ ಗಲಾಟೆ ಮಾಡುತ್ತಿದ್ದಾರೆ. ವಿರೋಧ ಪಕ್ಷಕ್ಕೆ ಇದ್ದ ಅವಕಾಶವನ್ನು ಅವರು ಸರಿಯಾಗಿ ಬಳಸಿಕೊಳ್ಳುತ್ತಿಲ್ಲ. ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವ ಪ್ರಯತ್ನ ನಡೆಸಿ ಅದರಲ್ಲಿ ಯಶಸ್ವಿಯಾಗದೆ ಇಂಗು ತಿಂದ ಮಂಗನಂತೆ ಆಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಅವರ ಬಳಿ ಶಾಸಕರ ಸಂಖ್ಯೆ ಹೆಚ್ಚಿದ್ದರೆ ಸಮ್ಮಿಶ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಿ. ಬರೀ ಸುಳ್ಳು ಹೇಳಿಕೊಂಡು ಜನರನ್ನು ಮೋಸ ಮಾಡುವ ಡೋಂಗಿಗಳು ಬಿಜೆಪಿಯವರು.ನಮ್ಮ ಕೆಲವು ಶಾಸಕರು ದುಡ್ಡು ತೆಗೆದುಕೊಂಡಿದ್ದಾರೆ.ಅವರು 30 ಕೋಟಿ ಆಫರ್ ನೀಡಿರುವುದು ನಿಜ. ಈ ಸಂಬಂಧ ನನ್ನ ಬಳಿ ದಾಖಲೆ ಇದೆ, ಸಮಯ ಬಂದಾಗ ಬಿಡುಗಡೆ ಮಾಡುತ್ತೇನೆ. ನಾಳೆಯ ಶಾಸಕಾಂಗ ಸಭೆಯಲ್ಲಿ ಎಲ್ಲಾ ಶಾಸಕರು ಭಾಗವಹಿಸುವ ವಿಶ್ವಾಸವಿದೆ.ಈ ಸಂಬಂಧ ಈಗಾಗಲೇ ವಿಪ್ ಜಾರಿ ಮಾಡಲಾಗಿದೆ ಎಂದು ತಿಳಿಸಿದರು.