ನವದೆಹಲಿ: ಬರೋಬ್ಬರಿ 17 ತಿಂಗಳ ನಂತರ ಭಾರತೀಯ ರಿಸರ್ವ್ ಬ್ಯಾಂಕ್ ಮೊದಲ ಬಾರಿಗೆ ತನ್ನ ರೆಪೋ ದರವನ್ನು ಇಳಿಕೆ ಮಾಡಲು ನಿರ್ಧರಿಸಿದೆ. 25 ಮೂಲಾಂಕದಷ್ಟು ದರ ಕಡಿಮೆ ಮಾಡಿದ್ದು ನೂತನ ರೆಪೋ ದರವು 6.25 ಇದೆ. ಈ ಮುಂಚೆ ಇದು 6.50 ಇತ್ತು. ಆರ್ಬಿಐನ ಈ ಕ್ರಮದಿಂದ ಜನಸಾಮಾನ್ಯರಿಗೆ ಆಗುವ ಪ್ರಮುಖ ಲಾಭಗಳಲ್ಲಿ ಸಾಲದ ಮೇಲಿನ ಬಡ್ಡಿ ದರದಲ್ಲಿ ಆಗುವ ಇಳಿಕೆಯೂ ಒಂದು. ಇವತ್ತು ನಡೆದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ)ಈ ಮಹತ್ವದ ನಿರ್ಧಾರ ಕೈಗೊಂಡಿದೆ. ರೆಪೋ ದರ ಇಳಿಕೆ ಮಾಡುವ ಕ್ರಮಕ್ಕೆ ಈ ಸಮಿತಿ 4-2 ಬಹುಮತದೊಂದಿಗೆ ಅಂಗೀಕರಿಸಿದೆ. ಸಮಿತಿಯ ಸದಸ್ಯರಾದ ವಿರಳ್ ಆಚಾರ್ಯ ಮತ್ತು ಚೇತನ್ ಘಾಟೆ ಅವರಿಬ್ಬರು ಮಾತ್ರ ಆರ್ಬಿಐ ದರ ವ್ಯತ್ಯಾಸವಾಗಬಾರದೆಂಬ ವ್ಯತಿರಿಕ್ತ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಶಕ್ತಿಕಾಂತ ದಾಸ್ ಅವರು ನೂತನ ಆರ್ಬಿಐ ಗವರ್ನರ್ ಆಗಿ ಅಧಿಕಾರ ಸ್ವೀಕರಿಸಿದ ಹೊತ್ತಿನಲ್ಲೇ ಈ ಬೆಳವಣಿಗೆ ನಡೆದಿದೆ. ಆದರೆ ಆರ್ಬಿಐ ತೋರಿದ ರಿಯಾಯಿತಿಯನ್ನು ಬ್ಯಾಂಕ್ಗಳು ತಮ್ಮ ಗ್ರಾಹಕರಿಗೆ ರವಾನಿಸಿದರೆ ಸಾಲದ ಮೇಲಿನ ಬಡ್ಡಿ ದರ ಕಡಿಮೆಯಾಗಲಿದೆ. ಫ್ಲೋಟಿಂಗ್ ಬಡ್ಡಿಯ ಮೇಲೆ ಸಾಲ ಪಡೆದವರಿಗೆ ಈ ಲಾಭ ಸಿಗಲಿದೆ. ಅವರು ಕಟ್ಟುವ ಸಾಲದ ಕಂತುಗಳ ಮೊತ್ತ ಕಡಿಮೆಯಾಗಲಿದೆ.
ಹಣದುಬ್ಬರನ್ನು ಶೇ. 4ರ ಮಟ್ಟಕ್ಕೆ ನಿಭಾಯಿಸಲು ಆರ್ಬಿಐ ಈ ರೆಪೋ ದರ ಕಡಿತದ ನಿರ್ಧಾರ ಕೈಗೊಂಡಿದೆ. ಆದರೆ, ಸಿಎಲ್ಆರ್ ಮತ್ತು ರಿವರ್ಸ್ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಯಥಾಸ್ಥಿತಿ ಉಳಿಸಿಕೊಳ್ಳಲಾಗಿದೆ.
ಏನಿದು ರೆಪೋ ದರ?
ರೆಪೋ ಅಂದರೆ ರೀಪರ್ಚೇಸ್ ರೇಟ್, ಅಂದರೆ ಮರುಖರೀದಿ ದರ. ಭಾರತೀಯ ರಿಸರ್ವ್ ಬ್ಯಾಂಕ್ ಸಂಸ್ಥೆಯು ಕಮರ್ಷಿಯಲ್ ಬ್ಯಾಂಕುಗಳಿಗೆ ನೀಡುವ ಹಣದ ಮೇಲಿನ ದರವಾಗಿದೆ.