ಬೆಂಗಳೂರು, ಫೆ.7-ಸಮ್ಮಿಶ್ರ ಸರ್ಕಾರ ಬಹುಮತದ ಕೊರತೆಯಿಂದ ಬಳಲುತ್ತಿದೆ. ವಿಧಾನಸಭೆಯಲ್ಲಿಂದು ಸುಮಾರು 40 ಮಂದಿ ಗೈರು ಹಾಜರಾಗಿದ್ದಾರೆ, ಅವರೆಲ್ಲ ಎಲ್ಲಿದ್ದಾರೆ ಎಂದು ಬಿಜೆಪಿ ಹಿರಿಯ ಶಾಸಕ ಶ್ರೀರಾಮುಲು ಪ್ರಶ್ನಿಸಿದ್ದಾರೆ.
ಸದನದಲ್ಲಿ ಸುಮಾರು 80 ಮಂದಿ ಶಾಸಕರು ಮಾತ್ರ ಭಾಗವಹಿಸಿದ್ದಾರೆ.ಉಳಿದವರು ಹಾಜರಿಲ್ಲ. ಅವರು ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ.ಏಕೆ ಬರುತ್ತಿಲ್ಲ ಎಂಬುದು ತಿಳಿಯಬೇಕು.ನಾವು ಸರ್ಕಾರ ಬೀಳಿಸುವ ಪ್ರಯತ್ನ ಮಾಡುವುದಿಲ್ಲ. ಆಂತರಿಕ ಗೊಂದಲದಿಂದ ಸರ್ಕಾರವೇ ಬಿದ್ದು ಹೋಗುತ್ತದೆ. ಮುಖ್ಯಮಂತ್ರಿ ಅವರ ಮೇಲೆ ವಿಶ್ವಾಸವಿಲ್ಲದೆ ಶಾಸಕರು ಸದನಕ್ಕೆ ಗೈರು ಹಾಜರಾಗುತ್ತಿದ್ದಾರೆ . ಈ ಸರ್ಕಾರ ಬಹುಮತ ಕಳೆದುಕೊಂಡಿದೆ ಎಂದು ಅವರು ಗಂಭೀರ ಆರೋಪ ಮಾಡಿದರು.
ಬಜೆಟ್ ಭಾಷಣದ ವೇಳೆ ಶಾಸಕರಿಗೆ ಬಜೆಟ್ ಪುಸ್ತಕಗಳನ್ನು ನೀಡದಿರುವ ನಿರ್ಣಯವನ್ನು ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವಿರೋಧಿಸಿದ್ದಾರೆ.ಈ ಹಿಂದಿನ 14 ವಿಧಾನಸಭೆಗಳಲ್ಲೂ ಆಯವ್ಯಯ ಮಂಡನೆ ಆಗುವಾಗ ಅದರ ಮುದ್ರಿತ ಪುಸ್ತಕಗಳ ಪ್ರತಿಗಳನ್ನು ಮೊದಲೇ ಶಾಸಕರಿಗೆ ನೀಡುವ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ.ಇದೇ ಮೊದಲ ಬಾರಿಗೆ ಅದನ್ನು ಬದಲಾವಣೆ ಮಾಡಲಾಗಿದೆ. ವಿಧಾನಸಭೆಯ ಸಚಿವಾಲಯದ ಲಘು ಪ್ರಕಟಣೆಯ ಪ್ರಕಾರ ಮುಖ್ಯಮಂತ್ರಿಯವರು ಬಜೆಟ್ ಭಾಷಣವನ್ನು ಓದಿ ಮುಗಿಸಿದ ಬಳಿಕ ಪುಸ್ತಕಗಳನ್ನು ನೀಡುವುದಾಗಿ ತಿಳಿಸಲಾಗಿದೆ. ಇದು ಸರಿಯಲ್ಲ.ಬಜೆಟ್ ಮಂಡನೆ ಆರಂಭದಲ್ಲೇ ಪ್ರತಿಗಳನ್ನು ಶಾಸಕರಿಗೆ ನೀಡುವ ಮೂಲಕ ಸಂಪ್ರದಾಯ ಮುಂದುವರೆಸಬೇಕೆಂದು ಅವರು ಒತ್ತಾಯಿಸಿದ್ದಾರೆ.