
ಬೆಂಗಳೂರು,ಫೆ.7-ಮೈತ್ರಿಪಕ್ಷದ ಗೊಂದಲದಿಂದಾಗಿ ರಾಜ್ಯ ಸರ್ಕಾರಕ್ಕೆ ಅಭದ್ರತೆ ಉಂಟಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರವನ್ನು ನಾವು ಬೀಳಿಸಲು ಹೋಗುವುದಿಲ್ಲ. ಮಿತ್ರ ಪಕ್ಷಗಳಲ್ಲೇ ಹೊಂದಾಣಿಕೆಯಿಲ್ಲ. ಹೀಗಾಗಿ ಸರ್ಕಾರಕ್ಕೆ ಬಹುಮತ ಇಲ್ಲ. ಕಾಂಗ್ರೆಸ್ನವರು ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ ಎನ್ನುತ್ತಾರೆ.ಜೆಡಿಎಸ್ನವರು ಕುಮಾರಸ್ವಾಮಿ ಮುಖ್ಯಮಂತ್ರಿ ಎನ್ನುತ್ತಾರೆ. ಹೀಗಾಗಿ ಮಿತ್ರ ಪಕ್ಷಗಳಲ್ಲಿರುವ ಒಡಕು ಬಯಲಾಗಿದೆ ಎಂದರು.
ಜೆಡಿಎಸ್ನವರು ನಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಲಾಗುತ್ತಿದೆ ಎಂದು ಆರೋಪಿಸುತ್ತಾರೆ. ಪ್ರತಿ ದಿನ ನಮ್ಮ ಪಕ್ಷದ ಶಾಸಕರು, ನಾಯಕರು ಚರ್ಚಿಸಿ ಪ್ರಸಕ್ತ ಸನ್ನಿವೇಶದಲ್ಲಿ ಮುಂದಿನ ದಿನಗಳಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತಿದೆ. ರಾಜ್ಯ ಸರ್ಕಾರದಲ್ಲಿ ಖಜಾನೆ ಖಾಲಿಯಾಗಿದ್ದು, ಬಹುಮತ ಇಲ್ಲ. ಬಜೆಟ್ ಮಂಡನೆಯ ಅಗತ್ಯವೂ ಇಲ್ಲ ಎಂದು ಹೇಳಿದರು.