ಬೆಂಗಳೂರು, ಫೆ.7- ಮೇಲ್ಮನೆಯಲ್ಲಿ ಕಾವೇರಿದ ಪ್ರತಿಭಟನೆ, ಪ್ರತಿಪಕ್ಷ ಬಿಜೆಪಿ ಸದಸ್ಯರಿಂದ ಮುಂದುವರಿದ ಧರಣಿ, ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ಆರೋಪಗಳ ಬಿತ್ತಿಪತ್ರ ಪ್ರದರ್ಶನ, ಗದ್ದಲ-ಕೋಲಾಹಲ ಉಂಟಾಗಿ ವಿಧಾನ ಪರಿಷತ್ ಕಲಾಪ ಬಲಿಯಾಯಿತು.
ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ, ಪ್ರಶ್ನೋತ್ತರ ಕಲಾಪ, ಸರ್ಕಾರಿ ಕಲಾಪಗಳು ನಡೆಯಬೇಕಾಗಿದ್ದ ವಿಧಾನ ಪರಿಷತ್ನ ಎರಡನೆ ದಿನದ ಅಧಿವೇಶನದಲ್ಲಿ ಇಂದು ಪ್ರತಿಪಕ್ಷಗಳ ಗದ್ದಲ, ಪ್ರತಿಭಟನೆ, ಆಡಳಿತ ಪಕ್ಷಗಳಿಂದಲೂ ಆರೋಪ-ಪ್ರತ್ಯಾರೋಪ ನಡೆದು ಕಲಾಪವನ್ನು ಎರಡು ಬಾರಿ ಮುಂದೂಡಲಾಯಿತು.
ಬಹುಮತವಿಲ್ಲದ ಸರ್ಕಾರ ಕಲಾಪ ನಡೆಸಲು ಸಾಧ್ಯವಿಲ್ಲ. ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕೆಂದು ಸದನದ ಬಾವಿಗಿಳಿದು ಪ್ರತಿಪಕ್ಷ ಬಿಜೆಪಿ ಸದಸ್ಯರು ಪ್ರತಿಭಟನೆಯನ್ನು ಮುಂದುವರಿಸಿದರು.
ಸಚಿವ ಪುಟ್ಟರಂಗಶೆಟ್ಟಿ ಅವರ ಭ್ರಷ್ಟಾಚಾರ, ವಕ್ಫ್ ಮಂಡಳಿಯಿಂದ ಭೂ ಕಬಳಿಕೆ, ಹಿಂದೂ ವಿರೋಧಿ ಸರ್ಕಾರ, ವರ್ಗಾವಣೆ ಸರ್ಕಾರ ಎಂಬ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಬಹುಮತವಿಲ್ಲದ ಈ ಸರ್ಕಾರ ತೊಲಗಲಿ ಎಂದು ಘೋಷಣೆಗಳನ್ನು ಕೂಗಿದರು.ಇದಕ್ಕೆ ಪ್ರತಿಯಾಗಿ ಆಡಳಿತ ಪಕ್ಷದ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರು ಬಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.
ಭ್ರಷ್ಟಾಚಾರವೇ ಬಿಜೆಪಿಯ ಮೂಲಮಂತ್ರ.ಅಮಿತ್ ಷಾ-ಮೋದಿ ಅವರು ಜನತಂತ್ರ ವ್ಯವಸ್ಥೆಯನ್ನು ನಾಶಮಾಡುತ್ತಿದ್ದಾರೆ. 50 ಕೋಟಿ ಆಮಿಷ, ಸಚಿವರ ಖರೀದಿ, ಶಾಸಕರ ಗಿರಿ, ಹಣ ಎಲ್ಲಿಂದ ಬರುತ್ತದೆ ಎಂಬ ಬಿತ್ತಿಪತ್ರಗಳನ್ನು ಪ್ರದರ್ಶಿಸಿದರು.
ಗದ್ದಲ-ಗಲಾಟೆ ನಡುವೆಯೇ ಸಭಾಪತಿ ಕೆ.ಪ್ರತಾಪ್ಚಂದ್ರಶೆಟ್ಟಿ ಅವರು ಸಭೆಯ ಮುಂದಿಡಲಾಗುವ ಕಾಗದ ಪತ್ರಗಳನ್ನು ಮಂಡಿಸುವಂತೆ ಸಚಿವರಿಗೆ ಸೂಚಿಸಿದರು.
ಈ ಹಿನ್ನೆಲೆಯಲ್ಲಿ ಸಭಾನಾಯಕರಾದ ಜಯಮಾಲಾ ಅವರು ಹಲವು ಸಚಿವರ ಹೆಸರಿನಲ್ಲಿದ್ದ ಕಾಗದ ಪತ್ರಗಳನ್ನು ಸಭೆ ಮುಂದೆ ಮಂಡಿಸಿದರು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯ ಮಂಡಿಸಿ ಮಾತನಾಡುವಂತೆ ಹಿರಿಯ ಸದಸ್ಯ ರೇವಣ್ಣ ಅವರಿಗೆ ಸೂಚಿಸಿದರು.
ಅದರನ್ವಯ ರೇವಣ್ಣ ಅವರು ಮಾತನಾಡಲು ಪ್ರಾರಂಭಿಸಿದಾಗ ಸದನದಲ್ಲಿ ಮತ್ತೆ ಗದ್ದಲ ಹೆಚ್ಚಾಯಿತು.ಈ ವೇಳೆ ಮಧ್ಯ ಪ್ರವೇಶಿಸಿದ ಸಭಾಪತಿ ಅವರು, ನೀವು ಯಾವ ಕಾರಣಕ್ಕೆ ಪ್ರತಿಭಟನೆ ನಡೆಸುತ್ತಿದ್ದೀರಿ, ಕಾರಣ ಹೇಳಿ ಎಂದು ಪ್ರಶ್ನಿಸಿದರು.
ಪ್ರತಿಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಮಾತನಾಡಿ, ಸರ್ಕಾರಕ್ಕೆ ಬಹುಮತವಿಲ್ಲ. ಮುಖ್ಯಮಂತ್ರಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಬಹುಮತ ಇಲ್ಲ ಎಂಬುದನ್ನು ಕೇಳಲು ಅದರದೇ ಆದ ವೇದಿಕೆಯಿದೆ.ಈ ರೀತಿ ಪ್ರತಿಭಟನೆ ಮಾಡಲು ಬರುವುದಿಲ್ಲ. ಇದು ಸಾಧುವೂ ಅಲ್ಲ, ಸದನ ನಡೆಯಲು ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಈ ಮನವಿಗೆ ಪ್ರತಿಭಟನಾನಿರತ ಸದಸ್ಯರು ಕಿವಿಗೊಡದೆ ಪ್ರತಿಭಟನೆ ಮುಂದುವರಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾರಂಭಿಸಿದರು.ಆಗ ಸಭಾಪತಿ ಅವರು ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದರು.