ಬೆಂಗಳೂರು,ಫೆ.7-ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನಾಳೆ ಮಂಡಿಸಲಿರುವ ಬಜೆಟ್ನಲ್ಲಿ ಶಿಕ್ಷಣ, ಕೃಷಿ, ಆರೋಗ್ಯ, ಗ್ರಾಮೀಣಾಭಿವೃದ್ದಿ, ನೀರಾವರಿ ಕ್ಷೇತ್ರಗಳಿಗೆ ಸಿಂಹಪಾಲು ದೊರೆಯುವ ಜೊತೆಗೆ ಹಲವಾರು ಜನಪ್ರಿಯ ಯೋಜನೆಗಳು ಘೋಷಣೆಯಾಗುವ ಸಾಧ್ಯತೆ ಇದೆ.
ಹಣಕಾಸು ಸಚಿವರೂ ಆಗಿರುವ ಕುಮಾರಸ್ವಾಮಿಯವರು ಸಮ್ಮಿಶ್ರ ಸರ್ಕಾರದಲ್ಲಿ ಮಂಡಿಸುತ್ತಿರುವ 2ನೇ ಬಜೆಟ್ ಇದಾಗಿದ್ದು, ಕೃಷಿಕರಿಗೆ ಹೆಚ್ಚಿನ ಪಾಲು ನೀಡಲಾಗುತ್ತಿದೆ.
ಕಳೆದ 8 ತಿಂಗಳ ಹಿಂದೆ ಬಜೆಟ್ ಮಂಡಿಸಿದ್ದ ಕುಮಾರಸ್ವಾಮಿಯವರು ಸಾಲಮನ್ನಾ ಯೋಜನೆಯನ್ನು ಘೋಷಿಸಿದ್ದರು. ಆದರೆ ಆ ವೇಳೆ ಅನುದಾನ ನಿಗದಿ ಸೇರಿದಂತೆ ಹಲವಾರು ವಿಷಯಗಳಲ್ಲಿ ಸ್ಪಷ್ಟತೆ ಇರಲಿಲ್ಲ. ಈ ಬಾರಿಯ ಬಜೆಟ್ನಲ್ಲಿ ಆಂತರಿಕ ಸಂಪನ್ಮೂಲ ಕ್ರೋಢೀಕರಣ ಸೇರಿದಂತೆ ಇತರ ವಿಷಯಗಳ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಿದ್ದಾರೆ ಎನ್ನಲಾಗಿದೆ.
.
ಅಂತರ್ಜಲ ಅಭಿವೃದ್ಧಿ ಮತ್ತು ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಭೂ ಮೇಲ್ಮೈ ಭಾಗದ ನೀರನ್ನು ಬಳಸಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಸುಮಾರು 53 ಸಾವಿರ ಕೋಟಿ ರೂ.ಗಳ ಬೃಹತ್ ಯೋಜನೆ ಘೋಷಣೆಯಾಗುವ ಸಾಧ್ಯತೆ ಇದೆ.
ವೃದ್ಧಾಪ್ಯ, ವಿಕಲಚೇತನ ಸೇರಿದಂತೆ ವಿವಿಧ ವರ್ಗಗಳ ಮಾಸಾಶನ ಹೆಚ್ಚಳ ಮಾಡಿ, ಅಂಗನವಾಡಿ ನೌಕರರ ವೇತನ ಪರಿಷ್ಕರಣೆಗೆ ಕುಮಾರಸ್ವಾಮಿ ಮನಸ್ಸು ಮಾಡಿದ್ದಾರೆ ಎನ್ನಲಾಗಿದೆ.
ಕೃಷಿ ವರ್ಗಕ್ಕೆ ವಿಶೇಷವಾಗಿ ವಿಮಾ ಸೌಲಭ್ಯವನ್ನು ನೀಡಲು ಕುಮಾರಸ್ವಾಮಿ ಮುಂದಾಗಿದ್ದು, ಫಸಲ್ ಭೀಮಾ ಯೋಜನೆ ರೈತರಿಗೆ ಸರಿಯಾಗಿ ತಲುಪದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವೇ ವಿಶೇಷ ವಿಮಾ ಯೋಜನೆಯನ್ನು ಸಿದ್ಧಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರ ಇತ್ತೀಚೆಗೆ ತಾನು ಮಂಡಿಸಿದ ಬಜೆಟ್ನಲ್ಲಿ ರೈತರಿಗೆ ವಾರ್ಷಿಕ 6000 ರೂ.ಅನುದಾನವನ್ನು ಘೋಷಣೆ ಮಾಡಿದೆ.ಅದಕ್ಕಿಂತಲೂ ಜನಪ್ರಿಯವಾದ ಯೋಜನೆಗಳನ್ನು ಕುಮಾರಸ್ವಾಮಿ ನಾಳೆ ಮಂಡಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಪೆÇಲೀಸ್ ಸಿಬ್ಬಂದಿಗಳ ವೇತನ ಪರಿಷ್ಕರಣೆಯಂತಹ ಮಹತ್ವದ ಯೋಜನೆಗಳನ್ನು ಘೋಷಿಸಲಿರುವ ಮುಖ್ಯಮಂತ್ರಿಗಳು, ಅನ್ನಭಾಗ್ಯ, ಕೃಷಿಭಾಗ್ಯ, ಕ್ಷೀರ ಭಾಗ್ಯದಂತಹ ಹಿಂದಿನ ಸರ್ಕಾರದ ಯೋಜನೆಗಳಿಗೆ ಇನ್ನಷ್ಟು ಅನುದಾನ ಒದಗಿಸುವ ಮೂಲಕ ಕೃಷಿ ವಲಯವನ್ನು ಬಲಪಡಿಸಲಿದ್ದಾರೆ ಎಂದು ಹೇಳಲಾಗಿದೆ.
ಬಜೆಟ್ ಪೂರ್ವ ತಯಾರಿಯಲ್ಲಿ ಕಾಂಗ್ರೆಸ್ನಿಂದ ಉಪಮುಖ್ಯಮಂತ್ರಿ ಪರಮೇಶ್ವರ್ ಕೂಡ ನಿರಂತರವಾಗಿ ತೊಡಗಿಸಿಕೊಂಡಿದ್ದರು. ನಾಳೆ ಮಂಡನೆಯಾಗುವ ಬಜೆಟ್ ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷಗಳಾದ ಜೆಡಿಎಸ್-ಕಾಂಗ್ರೆಸ್ನ ಪ್ರಣಾಳಿಕೆ ಆಧಾರಿತ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ಅವಲಂಬಿಸಿರುತ್ತದೆ ಎಂಬ ಮುನ್ಸೂಚನೆ ನೀಡಲಾಗಿದೆ.
ರೈತರ ಸಾಲಮನ್ನಾ ಮತ್ತು ಸರ್ಕಾರಿ ನೌಕರರ 6ನೇ ವೇತನ ಆಯೋಗದ ವರದಿ ಜಾರಿಯಿಂದ ಉಂಟಾಗಿರುವ ಆರ್ಥಿಕ ಹೊರೆಯನ್ನು ಸರಿದೂಗಿಸಲು ಕುಮಾರಸ್ವಾಮಿಯವರು ಹರಸಾಹಸಪಟ್ಟಿದ್ದು, ಆರ್ಥಿಕ ಶಿಸ್ತು ಕಾಪಾಡಲು ಹೆಚ್ಚಿನ ಒತ್ತು ನೀಡಿದ್ದಾರೆ ಎನ್ನಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಇನ್ನಷ್ಟು ಹೊಸ ಡಯಾಲಿಸಿಸ್ ಸೆಂಟರ್ಗಳ ಸ್ಥಾಪನೆ, ತಾಲ್ಲೂಕು ಆಸ್ಪತ್ರೆಗಳ ಉನ್ನತೀಕರಣಗಳಂತಹ ಯೋಜನೆಗಳು ಬಜೆಟ್ನಲ್ಲಿದೆ ಎಂದು ಹೇಳಲಾಗಿದೆ.
ಶಿಕ್ಷಣ ಕ್ಷೇತ್ರದಲ್ಲಿ 1000 ಇಂಗ್ಲೀಷ್ ಮಾಧ್ಯಮ ಶಾಲೆಗಳ ಆರಂಭ, ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಸುಮಾರು 500 ಕೋಟಿ ರೂ. ಅನುದಾನ ಸೇರಿದಂತೆ ಮಹತ್ವದ ನಿರ್ಧಾರಗಳನ್ನು ಕುಮಾರಸ್ವಾಮಿ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.