ಬೆಂಗಳೂರು: ಆಪರೇಷನ್ ಕಮಲ ಹಾಗೂ ರಾಜ್ಯ ರಾಜಕೀಯದ ಜಂಗೀ ಕುಸ್ತಿ ನಿರ್ಣಾಯಕ ಹಂತಕ್ಕೆ ಬರುತ್ತಿರುವಂತಿದೆ. ಒಂದು ಕಡೆ ಅತೃಪ್ತ ಶಾಸಕರನ್ನು ಹೆಡೆಮುರಿ ಕಟ್ಟಲು ಸಿದ್ದರಾಮಯ್ಯ ಮಾಸ್ಟರ್ ಪ್ಲಾನ್ ಮಾಡುತ್ತಿದ್ದರೆ, ಮತ್ತೊಂದು ಕಡೆ ಅತೃಪ್ತರನ್ನು ರಂಗೋಲಿ ಕೆಳಗೆಯೇ ನುಸುಳಿಸಲು ಬಿಜೆಪಿ ಯೋಜನೆ ಹಾಕಿದೆ. ಒಟ್ಟಾರೆ ಚಿತ್ರಣ ನೋಡಿದರೆ ಕಾಂಗ್ರೆಸ್ ಪಕ್ಷದ ನಾಲ್ವರು ಅತೃಪ್ತ ಶಾಸಕರು ಇವತ್ತೇ ರಾಜೀನಾಮೆ ನೀಡುವ ಸಾಧ್ಯತೆ ಇದೆ. ರಮೇಶ್ ಜಾರಕಿಹೊಳಿ, ನಾಗೇಂದ್ರ, ಮಹೇಶ್ ಕುಮಟಳ್ಳಿ ಮತ್ತು ಉಮೇಶ್ ಯಾದವ್ ಅವರು ರಾಜೀನಾಮೆ ಕೊಟ್ಟ ನಂತರ ಆಪರೇಷನ್ ಕಮಲ ತೀವ್ರ ಸ್ವರೂಪ ಪಡೆದುಕೊಳ್ಳಲಿದೆ.
ನಿನ್ನೆ ಬಜೆಟ್ ಅಧಿವೇಶನದ ಮೊದಲ ದಿನದಂದು 11 ಅತೃಪ್ತರು ಗೈರಾಗಿದ್ದರು. ಇವತ್ತು 20 ಶಾಸಕರು ಗೈರಾಗುವಂತೆ ನೋಡಿಕೊಳ್ಳುವುದು ಬಿಜೆಪಿಯ ತಂತ್ರವಾಗಿದೆ. ಈ ಎಲ್ಲಾ 20 ಶಾಸಕರು ಬಿಜೆಪಿ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆನ್ನಲಾಗಿದೆ.
ಅತ್ತ, ಅತೃಪ್ತರ ಆಟಕ್ಕೆ ಬ್ರೇಕ್ ಹಾಕಲು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪ್ರಬಲ ಅಸ್ತ್ರ ಪ್ರಯೋಗಿಸುವ ಇರಾದೆಯಲ್ಲಿದ್ದಾರೆ. ನಾಳೆ, ಅಂದರೆ ಬಜೆಟ್ ದಿನದಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಬೇಕೆಂದು ಸಿದ್ದರಾಮಯ್ಯ ಅವರು ಎಲ್ಲಾ ಕಾಂಗ್ರೆಸ್ ಶಾಸಕರಿಗೂ ವಿಪ್ ಹೊರಡಿಸಿದ್ದಾರೆ. ಯಾವುದೇ ಕಾರಣ ನೀಡದೇ ಸಭೆಗೆ ತಪ್ಪದೇ ಹಾಜರಾಗಬೇಕು ಎಂದು ಕಟ್ಟುನಿಟ್ಟಿನ ಅಪ್ಪಣೆ ಹಾಕಿದ್ದಾರೆ. ಒಂದು ವೇಳೆ ಸಕಾರಣವಿಲ್ಲದೆ ಸಭೆಗೆ ಬರದೇ ಇದ್ದರೆ ಅಂಥವರನ್ನು ಶಾಸಕ ಸ್ಥಾನದಿಂದಲೇ ಅನರ್ಹಗೊಳಿಸುವ ಯೋಜನೆಯಲ್ಲಿದ್ದಾರೆ ಸಿದ್ದರಾಮಯ್ಯ. ಇದು ಅತೃಪ್ತ ಶಾಸಕರನ್ನು ಭಯಭೀತಗೊಳಿಸಿದೆ. ಶಾಸಕ ಸ್ಥಾನ ಅನರ್ಹಗೊಂಡರೆ ಮುಂದಿನ 6 ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ. ಹೀಗಾದರೆ ಹೆಚ್ಚೂಕಡಿಮೆ ಆ ವ್ಯಕ್ತಿಯ ರಾಜಕೀಯ ಭವಿಷ್ಯಕ್ಕೆ ಚ್ಯುತಿ ಬಂದಂತೆಯೇ ಆಗುತ್ತದೆ.
ಇದಕ್ಕೂ ಬಿಜೆಪಿ ಹಾಗೂ ಅತೃಪ್ತರು ಪ್ರತಿತಂತ್ರ ರೂಪಿಸಿದ್ದಾರೆ. ನಾಳೆಯ ಸಭೆಗೆ ಗೈರಾದರೆ ಅನರ್ಹತೆಯ ಶಿಕ್ಷೆ ಅನುಭವಿಸಬೇಕಾಗುವುದರಿಂದ ಇವತ್ತೇ ರಾಜೀನಾಮೆ ಕೊಡುವುದು ಇವರ ಪ್ಲಾನ್. ಇವತ್ತು ನಾಲ್ವರು ರಾಜೀನಾಮೆ ಕೊಟ್ಟ ನಂತರ ಕ್ಷಿಪ್ರಗತಿಯಲ್ಲಿ ಮಿಕ್ಕೆಲ್ಲಾ ಕಾರ್ಯಾಚರಣೆಗಳು ನಡೆಯಲಿವೆ. ದೆಹಲಿ ಮತ್ತು ಮುಂಬೈನಲ್ಲಿ ಹಲವು ದಿನಗಳಿಂದ ವಾಸ್ತವ್ಯ ಹೂಡಿದ್ದ ಅತೃಪ್ತ ಶಾಸಕರು ಈಗಾಗಲೇ ಬೆಂಗಳೂರಿಗೆ ಆಗಮಿಸಿದ್ದು,
ಹೊರವಲಯದಲ್ಲಿದ್ದಾರೆನ್ನಲಾಗಿದೆ. ಇವತ್ತು ಇಡುವ ನಡೆಗಳು ಮುಂದಿನ ರಾಜಕೀಯ ಸ್ವರೂಪದ ಸುಳಿವು ನೀಡಲಿದೆ.
ಇಲ್ಲಿ ಬಿಜೆಪಿ ಎರಡನೇ ಪ್ಲಾನ್ ಕೂಡ ಸಿದ್ಧವಿದೆ. ಬಿಜೆಪಿ ಸಂಪರ್ಕದಲ್ಲಿರುವ 20 ರೆಬೆಲ್ ಶಾಸಕರು ಬಜೆಟ್ ಅಧಿವೇಶನಕ್ಕೆ ಗೈರಾಗುವಂತೆ ನೋಡಿಕೊಂಡು, ಆ ಮೂಲಕ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವಂತೆ ಮಾಡುವುದು. ನಂತರ, ಇದೇ ಕಾರಣದಿಂದ ರಾಜ್ಯಪಾಲರ ಮೂಲಕ ರಾಜ್ಯದ ವಿಧಾನಸಭೆಯನ್ನು ವಿಸರ್ಜಿಸುವುದು ಬಿಜೆಪಿಯ ಪ್ಲಾನ್ ಬಿ ಆಗಿದೆ.