ಬಜೆಟ್ ಮಂಡನೆ ವೇಳೆ ಸದನದ ಸದಸ್ಯರಿಗೆ ಬಜೆಟ್ ಪ್ರತಿ ನೀಡಬೇಕು: ಪ್ರತಿಪಕ್ಷ ನಾಯ ಯಡಿಯೂರಪ್ಪ

ಬೆಂಗಳೂರು, ಫೆ.7- ಹಣಕಾಸು ಖಾತೆ ಹೊಂದಿರುವ ಎಚ್.ಡಿ.ಕುಮಾರಸ್ವಾಮಿ ನಾಳೆ ಬಜೆಟ್ ಮಂಡನೆ ಮಾಡುವ ವೇಳೆ ಸದನದ ಸದಸ್ಯರೆಲ್ಲರಿಗೂ ಬಜೆಟ್ ಪ್ರತಿಗಳನ್ನು ನೀಡುವಂತೆ ಸೂಚನೆ ನೀಡಬೇಕೆಂದು ವಿಧಾನಸಭೆ ಸ್ಪೀಕರ್ ಅವರಿಗೆ ಪತ್ರ ಬರೆದಿರುವುದಾಗಿ ಪ್ರತಿ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈವರೆಗೂ ಬಜೆಟ್ ಮಂಡನೆ ವೇಳೆ ಹಣಕಾಸು ಖಾತೆ ಹೊಂದಿರುವ ಸಚಿವರು, ಇಲ್ಲವೇ ಮುಖ್ಯಮಂತ್ರಿಗಳು ಉಭಯ ಸದನಗಳ ಸದಸ್ಯರಿಗೆಲ್ಲಾ ಬಜೆಟ್ ಪ್ರತಿಗಳನ್ನು ನೀಡುವ ಸತ್‍ಸಂಪ್ರದಾಯವಿತ್ತು.ಆದರೆ, ಇದೇ ಮೊದಲ ಬಾರಿಗೆ ಕುಮಾರಸ್ವಾಮಿ ಈ ಶಿಷ್ಟಾಚಾರವನ್ನು ಮುರಿಯಲು ಹೋಗಿದ್ದಾರೆ ಎಂದು ದೂರಿದ್ದಾರೆ.

ಬಜೆಟ್ ಮಂಡನೆಯಾದ ನಂತರ ಪ್ರತಿಗಳನ್ನು ನೀಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಸಂಸತ್‍ನಲ್ಲಿ ಇದೇ ಸಂಪ್ರದಾಯವಿದೆ ಎಂದು ಹೇಳುತ್ತಿರುವುದು ಸರಿಯಲ್ಲ. ಸಂಸತ್ತಿನ ನಡವಳಿಕೆಗಳಿಗೂ ನಮ್ಮ ವಿಧಾನಸಭೆ ನಡವಳಿಕೆಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ. ಅದೇ ನಿಯಮವನ್ನು ಇಲ್ಲಿ ಪರಿಪಾಲನೆ ಮಾಡುವುದು ಸರಿಯೇ ಎಂದು ಪ್ರಶ್ನಿಸಿದರು.

ಈ ಸರ್ಕಾರ ಬಹುಮತವನ್ನು ನಿನ್ನೆಯೇ ಕಳೆದುಕೊಂಡಿದೆ.ಅಲ್ಪಮತಕ್ಕೆ ಕುಸಿದಿರುವ ಸರ್ಕಾರ ರಾಜ್ಯಪಾಲರಿಂದ ಸುಳ್ಳು ಭಾಷಣ ಮಾಡಿಸಿದೆ.ವಾಸ್ತವಕ್ಕೂ ಹತ್ತಿರವಿರದ ಅಂಕಿಅಂಶಗಳನ್ನು ಇಲ್ಲಿ ಸೇರಿಸಿದೆ. ಹೀಗಾಗಿ ರಾಜ್ಯಪಾಲರ ವಂದನಾ ನಿರ್ಣಯದ ಚರ್ಚೆಗೆ ಸಹಕಾರ ನೀಡುತ್ತಿಲ್ಲ ಎಂದರು.
ನಮಗೆ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಕೆಲವು ಶಾಸಕರು ಹೇಳುತ್ತಾರೆ.ಕೆಲವರಿಗೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗುವುದು ಇಷ್ಟವಿಲ್ಲ. ಅವರೆ ಖೆಡ್ಡ ತೋಡಲು ಸಿದ್ಧವಿದ್ದಾರೆ.ಸರ್ಕಾರ ಮುಂದುವರೆಸುವ ನೈತಿಕತೆ ಕಳೆದುಕೊಂಡಿದ್ದರೆ ಎಂದು ಬಿಎಸ್‍ವೈ ವಾಗ್ದಾಳಿ ನಡೆಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ