ಬೆಂಗಳೂರು: ಹಾಲಿ ಬಜೆಟ್ ಅಧಿವೇಶನದಲ್ಲೇ ಕಾಂಗ್ರೆಸ್ – ಜೆಡಿಎಸ್ ಸಮ್ಮಿಶ್ರ ಸರಕಾರವನ್ನು ಶತಾಯ ಗತಾಯ ಬೀಳಿಸುವ ಆಕ್ರಮಣಕಾರಿ ನಿರ್ಧಾರವನ್ನು ತಳೆದಿರುವ ಬಿಜೆಪಿ, ಆದಕ್ಕಾಗಿ ಹಣಕಾಸು ಮಸೂದೆಯನ್ನು ಸೋಲಿಸುವ ರಣತಂತ್ರವನ್ನು ಹೆಣೆದಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ಹಣಕಾಸು ಮಸೂದೆಯನ್ನು ಅಂಗೀಕರಿಸುವಾಗ ಮತ ವಿಭಜನೆಯನ್ನು ಆಗ್ರಹಿಸುವುದೇ ಬಿಜೆಪಿಯ ಉಪಾಯವಾಗಿದ್ದು ಆ ಮೂಲಕ ಸದನದಲ್ಲೇ ಸಮ್ಮಿಶ್ರ ಸರಕಾರವನ್ನು ಸೋಲಿಸುವ ತಂತ್ರ ಅದರದ್ದಾಗಿದೆ ಎನ್ನಲಾಗಿದೆ.
ಈ ದಿಶೆಯಲ್ಲಿ ಬಿಜೆಪಿ ನಾಯಕರು, ಕಾಂಗ್ರೆಸ್ ಪಾಳೆಯದಲ್ಲಿನ ಅತೃಪ್ತಿ, ಅಸಮಾಧಾನಗಳನ್ನು ತನ್ನ ಪರವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ ಎಂದು ವರದಿಗಳು ಹೇಳಿವೆ.
ಬಿಜೆಪಿ ನಾಯಕರು ತಮ್ಮ ಈ ಉದ್ದೇಶವನ್ನು ಬಜೆಟ್ ಅಧಿವೇಶನದ ಮೊದಲ ದಿನ ರಾಜ್ಯಪಾಲ ವಜೂಭಾಯಿ ವಾಲಾ ಅವರ ಭಾಷಣಕ್ಕೆ ಸಂಪೂರ್ಣವಾಗಿ ಅಡ್ಡಿ ಪಡಿಸಿದ್ದಲ್ಲದೆ ರಾಜ್ಯಪಾಲರು ನಿರುಪಾಯರಾಗಿ ತಮ್ಮ ಭಾಷಣವನ್ನು ಸ್ವಲ್ಪವೇ ಹೊತ್ತಿನಲ್ಲಿ ಅರ್ಧಕ್ಕೆ ಮುಗಿಸಬೇಕಾದ ಸ್ಥಿತಿ ಉಂಟಾದದ್ದು ಈಗ ಇತಿಹಾಸ.
‘ರಾಜ್ಯಪಾಲರು ಸಮ್ಮಿಶ್ರ ಸರಕಾರದ ಸುಳ್ಳಿನ ಕಂತೆಯನ್ನು ಓದುವುದನ್ನು ನಾವು ಬಯಸುವುದಿಲ್ಲ; ಸರಕಾರ ಅಲ್ಪ ಮತಕ್ಕೆ ಕುಸಿದಿದ್ದು ತನ್ನ ಬಹುಮತವನ್ನೂ ವಿಶ್ವಾಸವನ್ನೂ ಕಳೆದುಕೊಂಡಿದೆ’ಎಂದು ಕೂಗೂತ್ತಾ BJP ಸದಸ್ಯರು ಸದನದ ಬಾವಿಗೆ ಇಳಿದು ಬೊಬ್ಟಾಟ ನಡೆಸಿದ್ದರು.
ಸರಕಾರ ವಿಪ್ ಜಾರಿಗೊಳಿಸಿದ ಹೊರತಾಗಿಯೂ ಕನಿಷ್ಠ 10 ಮಂದಿ ಶಾಸಕರು ಕಲಾಪಕ್ಕೆ ಗೈರಾಗಿದ್ದರು. ನಿರೀಕ್ಷೆಯಂತೆ ಅತೃಪ್ತ ಶಾಸಕರಾದ ರಮೇಶ್ ಜಾರಕೀಹೊಳಿ (ಗೋಕಾಕ), ಉಮೇಶ್ ಜಿ ಜಾಧವ್ (ಚಿಂಚೋಳಿ), ಬಿ ನಾಂಗೇಂದ್ರ (ಬಳ್ಳಾರಿ), ಮಹೇಶ್ ಕಮತಳ್ಳಿ (ಅಥಣಿ) ಇವರು ಸದನಕ್ಕೆ ಗೈರಾಗಿದ್ದು ಇವರಿಗೆ ಕಾಂಗ್ರೆಸ್ ಪಕ್ಷ ಶೋ ಕಾಸ್ ನೊಟೀಸ್ ಜಾರಿ ಮಾಡಿದೆ.