ಬೆಂಗಳೂರು, ಫೆ.7- ಸಮ್ಮಿಶ್ರ ಸರ್ಕಾರದ ಅಳಿವು-ಉಳಿವಿನ ಜಿಜ್ಞಾಸೆ ಮೂಡಿಸಿರುವ ಆಪರೇಷನ್ ಕಮಲದ ಪ್ರಹಸನ ನಾಳೆಗೆ ತಾರ್ಕಿಕ ಅಂತ್ಯ ಕಾಣಲಿದೆ.
ಈಗಾಗಲೇ ಎಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಲಾಗಿದ್ದು, ಶಾಸಕಾಂಗ ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕು ಎಂಬ ಸೂಚನೆ ನೀಡಲಾಗಿದೆ. ವಿಧಾನಸಭೆ ಅಧಿವೇಶನದಲ್ಲೂ ಕಡ್ಡಾಯವಾಗಿ ಹಾಜರಿರುವಂತೆ ಸೂಚನೆ ನೀಡಿ ಸಿದ್ದರಾಮಯ್ಯ ವಿಪ್ ನೀಡಿದ್ದರು. ಆದರೆ, ಅದನ್ನು ಉಲ್ಲಂಘಿಸಿಯೂ ಸುಮಾರು 8 ಮಂದಿ ಕಾಂಗ್ರೆಸ್ ಶಾಸಕರು ನಿನ್ನೆ ಸದನದಲ್ಲಿ ಗೈರು ಹಾಜರಾಗಿದ್ದರು.
ಅದರಲ್ಲಿ ಕೆಲವರು ಪೂರ್ವಾನುಮತಿ ಪಡೆದರೆ, ಇನ್ನು ಕೆಲವರು ಯಾವುದೇ ಅನುಮತಿ ಪಡೆಯದೆ ಗೈರು ಹಾಜರಾಗಿರುವುದು ಕಾಂಗ್ರೆಸ್ನ ತಾಳ್ಮೆ ಪರೀಕ್ಷೆಯಾಗಿದೆ.
ನಾಳೆ ಕರೆದಿರುವ ಶಾಸಕಾಂಗ ಸಭೆಗೆ ಸಕಾರಣ ಇಲ್ಲದೆ ಗೈರು ಹಾಜರಾಗುವ ಶಾಸಕರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲು ಸ್ಪೀಕರ್ ರಮೇಶ್ಕುಮಾರ್ ಅವರಿಗೆ ಸಿದ್ದರಾಮಯ್ಯ ಅವರು ದೂರು ನೀಡಲಿದ್ದಾರೆ ಎಂದು ಹೇಳಲಾಗಿದೆ.
ಕಳೆದ ಶಾಸಕಾಂಗ ಸಭೆಗೂ ಗೈರು ಹಾಜರಾಗಿ, ವಿಧಾನಸಭೆ ಅಧಿವೇಶನಕ್ಕೂ ಹಾಜರಾಗದವರು ನಾಳೆ ನಡೆಯುವ ಶಾಸಕಾಂಗ ಸಭೆಯಲ್ಲೂ ಭಾಗವಹಿಸದಿದ್ದರೆ ಬಂಡಾಯದ ಬಾವುಟ ಹಿಡಿದು ನಿಂತಿರುವ ಶಾಸಕರಾದ ರಮೇಶ್ ಜಾರಕಿಹೊಳಿ, ಉಮೇಶ್ಜಾಧವ್, ನಾಗೇಂದ್ರ, ಮಹೇಶ್ ಕವಟಗಿ ಮಠ ಅವರ ರಾಜಕೀಯ ಭವಿಷ್ಯದ ಮೇಲೆ ಬ್ರಹ್ಮಾಸ್ತ್ರ ಪ್ರಯೋಗವಾಗಲಿದೆ.
ಬಿಜೆಪಿಯವರು ಕೈ ಶಾಸಕರಿಂದ ರಾಜೀನಾಮೆ ಕೊಡಿಸಲು ಹರಸಾಹಸ ನಡೆಸುತ್ತಿದ್ದಾರೆ.ನಿನ್ನೆಯಿಂದಲೂ ಬಿರುಸಿನ ಚಟುವಟಿಕೆಯಲ್ಲಿ ತೊಡಗಿದ್ದಾರೆ.ಆದರೆ, ಬಹಳಷ್ಟು ಮಂದಿ ಏಕಾಏಕಿ ರಾಜೀನಾಮೆ ನೀಡಲು ಹಿಂದೇಟು ಹಾಕುತ್ತಿದ್ದಾರೆ.ಬಿಜೆಪಿ ಸರ್ಕಾರ ರಚಿಸದೇ ಹೋದರೆ ತಾವು ಶಾಸಕಾಂಗ ಸ್ಥಾನಕ್ಕೆ ರಾಜೀನಾಮೆ ನೀಡಿಯೂ ವ್ಯರ್ಥವಾಗುತ್ತದೆ.ಇರುವ ಅಧಿಕಾರವನ್ನು ಕಳೆದುಕೊಂಡು ಮತ್ತೆ ಕ್ಷೇತ್ರಕ್ಕೆ ಕಾಲಿಡಲು ಸಾಧ್ಯವಾಗುವುದಿಲ್ಲ. ಸರ್ಕಾರ ರಚನೆಯ ಯೋಜನೆ ಬಗ್ಗೆ ಸ್ಪಷ್ಟ ಮಾಹಿತಿ ನೀಡಿ ಎಂದು ಕೆಲವು ಶಾಸಕರು ಬಿಜೆಪಿ ವರಿಷ್ಠರನ್ನು ಪ್ರಶ್ನಿಸಿದ್ದು, ಅದಕ್ಕೆ ಬಿಜೆಪಿಯಿಂದ ಈ ವರೆಗೂ ಸಮರ್ಥವಾದ ಉತ್ತರ ಸಿಕ್ಕಿಲ್ಲ ಎನ್ನಲಾಗಿದೆ.
ಕಾಂಗ್ರೆಸ್ ಪಾಳಯದಲ್ಲಿ ಆತಂಕವಿದ್ದರೆ, ಬಿಜೆಪಿ ಪಾಳಯದಲ್ಲಿ ಗೊಂದಲಗಳಿವೆ. ಕಳೆದ ಕೆಲವು ತಿಂಗಳಿನಿಂದ ಅನಪೇಕ್ಷಿತವಾಗಿ ಉಂಟಾಗಿರುವ ಈ ಗೊಂದಲ, ಆತಂಕಗಳಿಗೆ ನಾಳೆ ಬಹುತೇಕ ತೆರೆ ಬೀಳುವ ಸಾಧ್ಯತೆಗಳಿವೆ.