ಸರ್ಕಾರದಿಂದ ರಾಜ್ಯದಲ್ಲಿ ಇಸ್ರೇಲ್ ಕೃಷಿ ಪದ್ದತಿ ಜಾರಿ: ರಾಜ್ಯಪಾಲ ವಜುಭಾಯಿ ವಾಲಾ

ಬೆಂಗಳೂರು, ಫೆ.6- ರಾಜ್ಯದಲ್ಲಿ ಪದೇ ಪದೇ ಪುನರಾವರ್ತನೆಯಾಗುತ್ತಿರುವ ಬರ ಪರಿಸ್ಥಿತಿಯನ್ನು ಹತ್ತಿಕ್ಕಲು ಸೂಕ್ಷ್ಮ ನೀರಾವರಿ, ಶೂನ್ಯ ಬಂಡವಾಳ ಮತ್ತು ಇಸ್ರೇಲ್ ಕೃಷಿ ಪದ್ಧತಿಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ಹೇಳಿದರು.

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿದ ಅವರು, 2018ರ ಮುಂಗಾರು ಅವಧಿಯಲ್ಲಿ 100 ತಾಲ್ಲೂಕು ಹಾಗೂ ಹಿಂಗಾರು ಅವಧಿಯಲ್ಲಿ 156 ತಾಲ್ಲೂಕುಗಳು ಬರ ಪೀಡಿತವಾಗಿರುವುದು ಕಳವಳಕಾರಿ.

ಈ ತಾಲ್ಲೂಕುಗಳಲ್ಲಿ ಕುಡಿಯುವ ನೀರಿನ ಪೂರೈಕೆ, ಮೇವು ಲಭ್ಯತೆ, ಉದ್ಯೋಗಗಳ ಸೃಷ್ಟಿಗೆ ಸರ್ಕಾರ ಕ್ರಮ ಕೈಗೊಂಡಿದೆ.ಯಾವುದೇ ವಿಪತ್ತನ್ನು ಎದುರಿಸಲು ಜಿಲ್ಲೆಗಳಿಗೆ ಈಗಾಗಲೇ ಸಾಕಷ್ಟು ಹಣ ಬಿಡುಗಡೆ ಮಾಡಲಾಗಿದೆ. ಹಸಿರು ಮೇವು ಬೆಳೆಸಲು ರೈತರಿಗೆ 8.11 ಲಕ್ಷ ಮೇವು ಮಿನಿ ಕಿಟ್‍ಗಳನ್ನು ಉಚಿತವಾಗಿ ವಿತರಿಸಲಾಗಿದೆ. ಮುಂದಿನ ದಿನಗಳಲ್ಲಿ ಇದರಿಂದ 30 ಲಕ್ಷ ಟನ್ ಹಸಿರು ಮೇವು ಉತ್ಪಾದನೆಯಾಗುವ ನಿರೀಕ್ಷೆ ಇದೆ.

ಉದ್ಯೋಗ ಸೃಷ್ಟಿಗಾಗಿ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಳಸಿಕೊಳ್ಳಲಾಗುತ್ತಿದ್ದು, 2019ರ ಜನವರಿ 31ರವರೆಗೆ 18.56 ಲಕ್ಷ ಕುಟುಂಬಗಳಿಗೆ ಉದ್ಯೋಗ ಕಲ್ಪಿಸಲಾಗಿದ್ದು, 812 ಮಾನವ ದಿನಗಳ ಉದ್ಯೋಗ ಸೃಷ್ಟಿಯಾಗಿದೆ.

ಬರ ಪೀಡಿತ ತಾಲ್ಲೂಕುಗಳಲ್ಲಿ ಪ್ರತಿಯೊಬ್ಬ ಉದ್ಯೋಗ ಕಾರ್ಡ್‍ದಾರನಿಗೂ 150 ದಿನಗಳ ಕೆಲಸ ನೀಡಲಾಗುತ್ತಿದೆ. ಬರ ನಿರ್ವಹಣೆಗೆ ದೀರ್ಘಕಾಲಿನ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಸೂಕ್ಷ್ಮ ನೀರಾವರಿ, ಮಳೆನೀರು ಕೊಯ್ಲಿಗೆ ಉತ್ತೇಜನ ನೀಡಲಾಗುತ್ತಿದೆ.ಶೂನ್ಯಬಂಡವಾಳ ನೈಸರ್ಗಿಕ ಕೃಷಿ, ಇಸ್ರೇಲ್ ಮಾದರಿ ಕೃಷಿ ಪದ್ಧತಿಗಳನ್ನು ಜಾರಿಗೆ ತರಲು ವಿಶೇಷ ಅಭಿಯಾನ, ನಿರ್ದೇಶನಾಲಯಗಳನ್ನು ಸ್ಥಾಪಿಸಲಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ