ಗ್ರಾಮಗಳಿಗೆ ನೀರು ಪೂರೈಸಲು ಸರ್ಕಾರದಿಂದ ಜಲಧಾರೆ ಯೋಜನೆ: ರಾಜ್ಯಪಾಲ ವಜುಭಾಯಿ ವಾಲಾ

ಬೆಂಗಳೂರು, ಫೆ.6- ರಾಜ್ಯದ 1.80 ಕೋಟಿ ಜನಸಂಖ್ಯೆಗೆ ಪ್ರತಿ ನಿತ್ಯ 85 ಲೀಟರ್ ಕುಡಿಯುವ ನೀರು ಪೂರೈಸಲು 53ಸಾವಿರ ಕೋಟಿ ರೂ. ವೆಚ್ಚದ ಜಲಧಾರೆ ಯೋಜನೆಯನ್ನು ಕೈಗೆತ್ತಿಕೊಳ್ಳುತ್ತಿರುವುದಾಗಿ ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದ್ದಾರೆ.

ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿರುವ ಅವರು, ರಾಜ್ಯದ ಎಲ್ಲಾ ಗ್ರಾಮಗಳಿಗೆ ಭೂಮಿ ಮೇಲ್ಮೈನಿಂದ ನೀರು ಪೂರೈಸಲು ಜಲಧಾರೆ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಇದರ ವಿಸ್ತೃತ ಯೋಜನಾವರದಿ ತಯಾರಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ 16ಸಾವಿರ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದರು.

ಗ್ರಾಮೀಣಾಭಾಗದಲ್ಲಿ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆಗಾಗಿ ರಾಜ್ಯ ನಿರ್ಮಲೀಕರಣ ನೀತಿಯನ್ನು ಶೀಘ್ರದಲ್ಲೇ ಅನುಷ್ಠಾನಕ್ಕೆ ತರುತ್ತಿರುವುದಾಗಿ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಅಕ್ಟೋಬರ್ 2ರ ಗುರಿಯಾಗಿಟ್ಟುಕೊಂಡು ನೈರ್ಮಲೀಕರಣ ಯೋಜನೆ ಜಾರಿಗೊಳಿಸುತ್ತಿದೆ.ಅದಕ್ಕೂ ಮೊದಲೇ ರಾಜ್ಯ ಸರ್ಕಾರ 2018ರ ನವೆಂಬರ್ 19ರಂದು ವಿಶ್ವ ಶೌಚಾಲಯ ದಿನದಂದು ಗ್ರಾಮೀಣ ಪ್ರದೇಶವನ್ನು ಬಯಲು ಬಹಿರ್ದೆಶೆ ಮುಕ್ತ ಎಂದು ಘೋಷಿಸಿದೆ.

ಸಮಾಜ ಕಲ್ಯಾಣ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಇಲಾಖೆಗಳಿಂದ 1135 ವಸತಿ ಶಾಲೆಗಳು, 4817 ವಸತಿ ನಿಲಯಗಳನ್ನು ನಡೆಸಲಾಗುತ್ತಿದ್ದು, 6 ಲಕ್ಷ ಮಕ್ಕಳಿಗೆ ಇಲ್ಲಿ ಉತ್ತಮ ಶಿಕ್ಷಣ ದೊರೆಯುತ್ತಿದೆ.ಈ ವರ್ಷ 4ಸಾವಿರ ಕೋಟಿ ವೆಚ್ಚದಲ್ಲಿ 152 ವಸತಿ ಶಾಲೆಗಳು, 427 ವಸತಿ ನಿಲಯಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯಿಂದ ಸಮೃದ್ಧಿ, ಉನ್ನತಿ, ಐರಾವತ ಯೋಜನೆಗಳನ್ನು ಆರಂಭಿಸಲಾಗಿದೆ.ಈ ಕಾರ್ಯಕ್ರಮಗಳಡಿ 15,650 ಫಲಾನುಭವಿಗಳು 650 ಕೋಟಿಗಳಷ್ಟು ನೆರವು ಪಡೆದಿದ್ದಾರೆ.ಎಸ್ಸಿ-ಎಸ್ಟಿ ಸಮುದಾಯಗಳ ಅಭಿವೃದ್ಧಿಗೆ ವಿವಿಧ ಇಲಾಖೆಗಳಿಗೆ 29,208 ಕೋಟಿ ಅನುದಾನ ಹಂಚಿಕೆ ಮಾಡಲಾಗಿದೆ.

ಬೀದಿ ಬದಿ ವ್ಯಾಪಾರಿಗಳಿಗಾಗಿ ಬಡವರ ಬಂಧು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಹಾಲು ಉತ್ಪಾದಕರ ಖಾತೆಗಳಿಗೆ ಪೆÇ್ರೀ ಧನ ನೇರವಾಗಿ ವಿತರಿಸಲು ಕ್ಷೀರ ಸಿರಿಯಂತಹ ಯೋಜನೆಗಳನ್ನು ಆರಂಭಿಸಲಾಗಿದೆ. ಹೈದರಾಬಾದ್ ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ಸಾವಿರ ಕೋಟಿ, ವಿಶೇಷ ಅಭಿವೃದ್ಧಿ ಯೋಜನೆಗಳಿಗೆ 3007 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದು ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ