ಬೆಂಗಳೂರು, ಫೆ.6- ಬೆಳಗಾವಿ ಜಿಲ್ಲೆಯ ಶಿರಸಂಗಿ ಗ್ರಾಮದ ಕಾಳಿಕಾದೇವಿ ದೇವಸ್ಥಾನಕ್ಕೆ ಬರುವ ಕೋಟ್ಯಂತರ ದೇಣಿಗೆಯನ್ನು ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆ ಕಬಳಿಸುತ್ತಿದೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಸಮಿತಿ ಆರೋಪಿಸಿದೆ.
ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ರಾಜ್ಯಾಧ್ಯಕ್ಷ ಬಸವರಾಜ್, ಟಿ.ಕೆ.ಹಳ್ಳಿ ಶಿರಸಂಗಿ ಗ್ರಾಮದ ಕಾಳಿಕಾ ದೇವಿ ದೇವಸ್ಥಾನಕ್ಕೆ ರಾಜ್ಯದ ಹಲವಾರು ಕಡೆಯಿಂದ ಭಕ್ತಾದಿಗಳು ಆಗಮಿಸುತ್ತಾರೆ. ಇದರಿಂದ ಕೋಟ್ಯಂತರ ರೂ.ದೇಣಿಗೆ ಸಂಗ್ರಹವಾಗುತ್ತದೆ. ಶ್ರೀ ಕಾಳಿಕಾದೇವಿ ಟ್ರಸ್ಟ್ ಹಾಗೂ ಶ್ರೀ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ವಿಕಾಸ್ ಸಂಸ್ಥೆಯು 16 ವರ್ಷಗಳಿಂದ ನೋಂದಣಿ ರಿನೀವಲ್ ಮಾಡಿಸಿಕೊಳ್ಳದೆ ಕಾನೂನು ಬಾಹೀರವಾಗಿ ಭಕ್ತರನ್ನು ವಂಚಿಸುತ್ತಿದೆ ಎಂದು ದೂರಿದರು.
ಹೀಗಿರುವಾಗ ಅಲ್ಲಿಗೆ ಬರುವ ವಿವಿಧ ರಾಜ್ಯಗಳ ಹಾಗೂ ಜಿಲ್ಲೆಯ ಭಕ್ತರು ಯಾರ ಹತ್ತಿರ ದೇವಿಗೆ ಧನ ಸಹಾಯ ಮಾಡಬೇಕು ಹಾಗೂ ಯಾವ ಸಂಸ್ಥೆಯಲ್ಲಿ ಸೇವೆ ಸಲ್ಲಿಸಬೇಕೆಂಬ ಗೊಂದಲ ಉಂಟಾಗಿದೆ. ಈ ಕುರಿತು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿಗೆ ದೂರುಗಳು ಬಂದಿವೆ.
ಆದ್ದರಿಂದ ವಿಶ್ವಕರ್ಮ ಸಮಾಜ ವಿಕಾಸ ಸಂಸ್ಥೆಯ ಪದಾಧಿಕಾರಿಗಳು ತಾವು ಕಾರ್ಯನಿರ್ವಹಿಸುತ್ತಿರುವ ಕ್ಷೇತ್ರವನ್ನು ಗೌರವದಿಂದ ತೆರವುಗೊಳಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಕಾನೂನು ರೀತಿ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಸಿದರು.