ಸರಳ ಜೀವನ, ನಿಷ್ಠುರ ರಾಜಕಾರಣಕ್ಕೆ ಸುದ್ದಿಯಾದ ನಾಯಕಿ: ಸಿಎಂ ಮಮತಾ ಬ್ಯಾನರ್ಜಿ ಸಂಬಳ ಎಷ್ಟು ಗೊತ್ತೇ?

ನವದೆಹಲಿಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿಯವರು ಬೀದಿಗಿಳಿಯುವ ಮೂಲಕ  ಮತ್ತೆ ಸುದ್ದಿಯಲ್ಲಿದ್ದಾರೆ. ದೇಶದ ಇತಿಹಾಸದಲ್ಲಿಯೇ ಇಲ್ಲಿಯವರೆಗೂ ಕಂಡರಿಯದ ಕಾನೂನು ಸಂಘರ್ಷ ಮತ್ತು ಬೀದಿ ರಂಪಾಟಕ್ಕೆ ಕೋಲ್ಕತ್ತಾ ಸಾಕ್ಷಿಯಾಗಿದೆ. ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರನ್ನು ವಿಚಾರಣೆಗೆ ಒಳಪಡಿಸಲು ತೆರಳಿದ್ದ ಸಿಬಿಐ ಅಧಿಕಾರಿಗಳನ್ನೇ ದೀದಿ ಸರ್ಕಾರ ಬಂಧಿಸಿದ್ದ ಪ್ರಕರಣ ಈಗ ದೇಶದ್ಯಾಂತ ಬಿಸಿ ಬಿಸಿಯಾಗಿ ಚರ್ಚೆಯಾಗುತ್ತಿದೆ.

ಮಮತಾ ಬ್ಯಾನರ್ಜಿಯವರು ಒಂದು ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದವರು. ತಮ್ಮ ರಾಜಕೀಯ ವೃತ್ತಿ ಜೀವನವನ್ನು ಕಾಂಗ್ರೆಸ್ಸಿನಲ್ಲಿಯೇ ಶುರು ಮಾಡಿದ ಇವರು ಸರಳ ಜೀವನ ಮತ್ತು ನಿಷ್ಠುರ ರಾಜಕಾರಣಕ್ಕೆ ಹೆಸರು ವಾಸಿಯಾದರು. ರಾಜಕೀಯದಲ್ಲಿ ಓರ್ವ ಮಹಿಳೆಯಾಗಿ ಅತೀ ಶೀಘ್ರದಲ್ಲಿಯೇ 1976 ರಲ್ಲಿ ರಾಜ್ಯ ಮಹಿಳಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ಏರಿದರು.

ಎಪ್ಪತ್ತರ ದಶಕದ ಮಧ್ಯದಲ್ಲಿ ಬಂಗಾಳದಲ್ಲಿ ಕಳಪೆ ಮಟ್ಟಕೆ ಇಳಿದ ರಾಜಕೀಯವನ್ನು ಸರಿಪಡಿಸಲು ಮುಂದಾಗಿದ್ದ ಇವರಿಗೆ ಕೇವಲ 21 ವರ್ಷ. ಅಲ್ಲದೇ ಕಾಲೇಜಿ ವಿದ್ಯಾರ್ಥಿಯಾಗಿದ್ದಾಗಲೇ ರಾಜಕೀಯಕ್ಕೆ ಧುಮುಕ್ಕಿದ್ದರು. ರಾಜಕೀಯ ಜೀವನದುದ್ದಕ್ಕೂ ಅತಿ ಸರಳವಾದ ಜೀವನ ಶೈಲಿಯನ್ನು ಅನುಸರಿಸಿದರು. ಅವರು ಎಂದೂ ಹಣವನ್ನು ದುಂದುವೆಚ್ಚ ಮಾಡಲಿಲ್ಲ. ಯಾವಾಗಲೂ ತಮ್ಮ ಹೆಗಲಿಗೆ ಒಂದು ಖಾದಿ ಚೀಲವನ್ನು ಹಾಕಿಕೊಂಡು ಸರಳವಾಗಿರುತ್ತಿದ್ದರು. ತಮ್ಮ ಜೀವನ ಪರ್ಯಂತರವಿಡೀ ಅವರು ಒಂಟಿಯಾಗಿಯೇ ಉಳಿದರು.

1997 ರಲ್ಲಿ ಮಮತಾ ಬ್ಯಾನರ್ಜಿಯವರು ಪಶ್ಚಿಮ ಬಂಗಾಳದ ಕಾಂಗ್ರೆಸ್‌ನಿಂದ ಹೊರ ಬಂದರು. ಬಳಿಕ ಅಂದೇ ಅಖಿಲ ಭಾರತ ತೃಣಮೂಲ ಕಾಂಗ್ರೆಸ್‌ ಅನ್ನು ಸ್ಥಾಪಿಸಿದರು. ಈ ಪಕ್ಷ ಅತೀ ಶೀಘ್ರದಲ್ಲೇ ದೀರ್ಘಕಾಲದಿಂದಲೂ ಆಡಳಿತದಲ್ಲಿದ್ದ ಕಮ್ಯುನಿಸ್ಟ್ ಸರ್ಕಾರದ ಪ್ರಪ್ರಥಮ ವಿರೋಧಿ ಪಕ್ಷವಾಗಿ ಹೊರಹೊಮ್ಮಿತು. ಹೀಗೆ ರಾಜಕೀಯ ಮಾಡುತ್ತಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಪಕ್ಷ 2009ರ ಲೋಕಸಭಾ ಚುನಾವಣೆಯಲ್ಲಿ 19 ಸಂಸದ ಸ್ಥಾನಗಳನ್ನು ಗೆಲ್ಲುವುದರ ಮೂಲಕ ಅತ್ಯುತ್ತಮ ಸಾಧನೆಯನ್ನು ಮಾಡಿತು.

ಈ ಹಿಂದೆ ನಡೆದ 2014ರ ಲೋಕಸಭಾ ಚುನಾವಣೆಯಲ್ಲಿಯೂ ಪಶ್ಚಿಮ ಬಂಗಾಳದ 42 ಸ್ಥಾನಗಳ ಪೈಕಿ ತೃಣಮೂಲ ಕಾಂಗ್ರೆಸ್‌ ಗೆದ್ದಿದ್ದು ಬರೋಬ್ಬರಿ 34 ಸೀಟುಗಳನ್ನು. ಯಾವ ದೃಷ್ಟಿಯಿಂದ ನೋಡಿದರೂ ಇದು ಅತ್ಯುತ್ತಮ ಸಾಧನೆಯೇ. ಇಡೀ ದೇಶವೇ ಮೋದಿ ಅಲೆಯಲ್ಲಿದ್ದಾಗ ದೀದಿ ನಾಡು ಮಾತ್ರ ಅವರದ್ದೇ ಹಿಡತದಲ್ಲಿತ್ತು. ಹೀಗೆ ವಿಧಾನಸಭೆ ಮತ್ತು ಸ್ಥಳೀಯ ಚುನಾವಣೆ ಎನ್ನದೇ ಎಲ್ಲೆಡೆಯೂ ತೃಣಮೂಲ ಕಾಂಗ್ರೆಸ್ಸಿನದ್ದೇ ಪಾರುಪತ್ಯ.

ಸತತ 3 ದಶಕಗಳು ಆಡಳಿತದಲ್ಲಿದ್ದ ಕಮ್ಯುನಿಸ್ಟ್​​ ಪಕ್ಷವನ್ನು ದೀದಿ ಹೊಡೆದುರುಳಿಸಿದರು. ಅಲ್ಲಿಯೇ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿ ಅಧಿನಾಯಕಿಯಾದರು.
2011 ಇತ್ತೀಚೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕೇವಲ 1 ರೂಪಾಯಿ ಸಂಬಳ ತೆಗೆದುಕೊಳ್ಳುತ್ತಿದ್ದಾರೆ. ಇದು ನಿಮಗೆ ಆಶ್ಚರ್ಯವೇ ಎನಿಸಬಹುದು, ಆದರೂ ಸತ್ಯ. ಅಲ್ಲಿನ ಸರ್ಕಾರದಲ್ಲಿ ಓರ್ವ ಮಂತ್ರಿಗೆ 40 ಸಾವಿರ ರೂಪಾಯಿಯಷ್ಟು ಸಂಬಳವಿದೆ. ಇನ್ನು ದೀದಿ ಸಿಎಂ ಆಗಿರುವ ಕಾರಣ ತುಸು ಹೆಚ್ಚೇ ಸಂಬಳವಿರುತ್ತದೆ. ಆದರೆ, ಇವರು ತಿಂಗಳಿಗೆ ಪಡೆಯುವ ಸಂಬಳ ಕೇವಲ ಒಂದು ರೂಗಳು. 2011 ಮೇ. 20 ರಂದೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಮಮತಾ ಬ್ಯಾಜರ್ನಿಯವರು, ಅಂದಿನಿಂದ ಇಂದಿನವರೆಗೂ ಒಂದು ರೂಪಾಯಿ ಸಂಬಳ ಪಡೆಯುತ್ತಿದ್ದಾರೆ. ಅಲ್ಲದೇ ಸರ್ಕಾರಿ ಕಾರು ಕೂಡ ಬಳಸುತ್ತಿಲ್ಲ ಎನ್ನಲಾಗಿದೆ. ಏನೇ ಆದರೂ, ಈ ವಿಚಾರದಲ್ಲಿ ದೀದಿಯವರ ನಡೆ ಮಾತ್ರ ಎಲ್ಲರಿಗೂ ಮಾದರಿ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ