ನವದೆಹಲಿ, ಫೆ.6 (ಪಿಟಿಐ)- ಕಾಶ್ಮೀರ ವಿಮೋಚನೆಗಾಗಿ ಹೋರಾಡುತ್ತಿರುವ ಹಾಗೂ ಸರಣಿ ಭಯೋತ್ಪಾನೆ ಕೃತ್ಯಗಳಲ್ಲಿ ಶಾಮೀಲಾಗಿರುವ ಜಮ್ಮು-ಕಾಶ್ಮೀರದ ತೆಹ್ರೀಕ್-ಉಲ್-ಮುಜಾಹಿದ್ದೀನ್(ಟಿಯುಎಂ) ಉಗ್ರಗಾಮಿ ಬಣವನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಭಾರತದಲ್ಲಿ ವಿವಿಧ ಕೃತ್ಯಗಳನ್ನು ಎಸಗುವ ಮೂಲಕ ಟಿಯುಎಂ ಭಯೋತ್ಪಾದನೆಯಲ್ಲಿ ಶಾಮೀಲಾಗಿದೆ ಹಾಗೂ ಅದರ ಸದಸ್ಯರು ವಿದೇಶಗಳಿಂದ ಹಣಕಾಸು ನೆರವು ಪಡೆಯುತ್ತಿದ್ದಾರೆ. ಈ ಕಾರಣಗಳಿಂದ ಈ ಉಗ್ರಗಾಮಿ ಸಂಘಟನೆ ಮೇಲೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ತೆಹ್ರೀಕ್-ಉಲ್-ಮುಜಾಹಿದ್ದೀನ್(ಟಿಯುಎಂ) ಉಗ್ರಗಾಮಿ ಸಂಘಟನೆ 1990ರಲ್ಲಿ ಕಾಶ್ಮೀರ ವಿಮೋಚನೆ ಉದ್ದೇಶದೊಂದಿಗೆ ಅಸ್ತಿತ್ವಕ್ಕೆ ಬಂದಿದ್ದು, ಇದಕ್ಕಾಗಿ ಹಲವಾರು ಭಯೋತ್ಪಾದನೆ ಕೃತ್ಯಗಳಲ್ಲಿ ಸಕ್ರಿಯ ಪಾತ್ರ ವಹಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಈ ಉಗ್ರಗಾಮಿ ಬಣವು ಗ್ರೆನೇಡ್ ದಾಳಿ, ಶಸ್ತ್ರಾಸ್ತ್ರಗಳ ಅಪಹರಣ, ಹಿಜ್‍ಬುಲ್ ಮುಜಾಹಿದ್ದೀನ್ (ಎಚ್‍ಎಂ) ಮತ್ತು ಲಷ್ಕರ್-ಎ-ತೈಬಾ(ಎಲ್‍ಇಟಿ) ಮತ್ತಿತರ ಸಂಘಟನೆಗಳಿಗೆ ನೆರವು ನೀಡುತ್ತಿದೆ ಎಂದು ಸಚಿವಾಲಯದ ಉನ್ನತಾಧಿಕಾರಿಯೊಬ್ಬರು ತಿಳಿಸಿದ್ದಾರೆ.