ಶಬರಿಮಲೆ ವಿವಾದ ಸುಪ್ರೀಂಕೋರ್ಟ್ ತೀರ್ಪು ಮರು ಪರಿಶೀಲನೆ: ಮುಖ್ಯ ನ್ಯಾಯಾಮೂರ್ತಿ ನೇತೃತ್ವದ ಪೀಠದಿಂದ ಅರ್ಜಿಗಳ ವಿಚಾರಣೆ

ನವದೆಹಲಿ, ಫೆ.6- ವಿಶ್ವವಿಖ್ಯಾತ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೆ ಅವಕಾಶ ನೀಡಿರುವ ಸುಪ್ರೀಂಕೋರ್ಟ್ ತೀರ್ಪನ್ನು ಮರು ಪರಿಶೀಲನೆ ಮಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆ ವೇಳೆ ಇಂದು ಪರ ಮತ್ತು ವಿರೋಧ ವಾದ-ವಾಗ್ವಾದಕ್ಕೆ ಕಾರಣವಾಯಿತು.

ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗಯ್ ನೇತೃತ್ವದ ಪೀಠವು ಇಂದು ಈ ಕುರಿತು ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿತು.
ಸರ್ವೋಚ್ಚ ನ್ಯಾಯಾಲಯ ನೀಡಿರುವ ಎಲ್ಲಾ ಮಹಿಳೆಯರಿಗೆ ದೇವರ ದರ್ಶನ ಅವಕಾಶ ತೀರ್ಪನ್ನು ಮರುಪರಿಶೀಲಿಸಿ ಅದನ್ನು ಬದಿಗಿರಿಸುವಂತೆ ನಾಯರ್‍ಸರ್ವೀಸ್ ಸೊಸೈಟಿಯ ಪರವಾಗಿ ಹಿರಿಯ ವಕೀಲ ಕೆ.ಪ್ರಸರಣ್ ಕೋರ್ಟ್‍ಗೆ ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಕೇರಳ ಸರ್ಕಾರದ ಪರ ವಕೀಲರು ಈಗಾಗಲೇ ನೀಡಿರುವ ತೀರ್ಪನ್ನು ಮರುಪರಿಶೀಲಿಸುವ ಮೂಲಕ ಈ ವಿಷಯ ಮತ್ತೆ ಕೆದಕಲು ಆಸ್ಪದ ನೀಡಬಾರದು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಮಾಡಿದರು.

ಎಲ್ಲಾ ವಯೋಮಾನದ ಮಹಿಳೆಯರಿಗೆ ಅವಕಾಶ ನೀಡುವ ಮೂಲಕ ಸುಪ್ರೀಂಕೋರ್ಟ್ ಸಮಾನತೆ ಮತ್ತು ಲಿಂಗ ತಾರತಮ್ಯವನ್ನು ನಿವಾರಿಸುವ ಉತ್ತಮ ತೀರ್ಪು ನೀಡಿದೆ. ಇದನ್ನು ಮತ್ತೆ ಪರಿಶೀಲಿಸಲು ಅವಕಾಶ ನೀಡಬಾರದು ಎಂದು ಕೋರಿದರು.

ಅಸ್ಪೃಶ್ಯತೆ ಮತ್ತು ದೇವಾಲಯದ ಪಾವಿತ್ರತೆ ಹೆಸರಿನಲ್ಲಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪುರಸ್ಕರಿಸಬಾರದು. ಈಗಾಗಲೇ ಸುಪ್ರೀಂಕೋರ್ಟ್ ನೀಡಿರುವ ತೀರ್ಪು ಸ್ಪಷ್ಟವಾಗಿದೆ ಎಂದು ಕೇರಳ ಸರ್ಕಾರ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ