ಬೆಂಗಳೂರು,ಫೆ.6- ಸುಮಲತಾ ಅಂಬರೀಶ್ ಅವರು ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಭಾರಿ ಚರ್ಚೆ ನಡೆಯುತ್ತಿದೆ. ಮಂಡ್ಯ ಲೋಕಸಭೆ ಕ್ಷೇತ್ರಕ್ಕೆ ತಮ್ಮ ತಮ್ಮದೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಸಮ್ಮಿಶ್ರ ಸರ್ಕಾರದ ಪಾಲುದಾರ ಪಕ್ಷಗಳು ಸಿದ್ಧತೆ ನಡೆಸಿವೆ.
ಮಂಡ್ಯದಿಂದ ಕಣಕ್ಕಿಳಿಯಲು ಸುಮಲತಾ ಕೂಡ ಆಸಕ್ತಿ ತೋರಿದ್ದಾರೆ, ಇದು ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ನಲ್ಲಿ ಆತಂಕ ಮೂಡಿಸಿದೆ, ಸುಮಲತಾ ಅವರಿಗೆ ಸಹಾನುಭೂತಿಯ ಅಲೆ ಸಹಾಯ ಮಾಡಲಿದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಅವರನ್ನು ಮಂಡ್ಯದಿಂದ ಕಣಕ್ಕಿಳಿಸಲು ಜೆಡಿಎಸ್ ಸಿದ್ಧತೆ ನಡೆಸಿತ್ತು, ಆದರೆ ಸುಮಲತಾ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ವಿಷಯದಿಂದಾಗಿ ಜೆಡಿಎಸ್ನ ಎಲ್ಲಾ ಪ್ಲಾನ್ ಉಲ್ಟಾ ಹೊಡೆದಿದೆ, ಲೋಕಸಭೆ ಸೀಟು ಹಂಚಿಕೆ ವಿಷಯದಲ್ಲಿ ಮಂಡ್ಯ ಕ್ಷೇತ್ರ ಪಡೆಯಲು ಜೆಡಿಎಸ್ ಹವಣಿಸುತ್ತಿದೆ.
ಈ ನಡುವೆ ಜೆಡಿಎಸ್ ಅಭಿಮಾನಿಗಳು ಸುಮಲತಾ ಸ್ಪರ್ಧೆ ಬಗ್ಗೆ ಟೀಕೆ ಮಾಡುತ್ತಿದ್ದಾರೆ, ಮಂಡ್ಯ ಲೋಕಸಭೆ ಕ್ಷೇತ್ರದಿಂದ ಸುಮಲತಾ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ, ಮಂಡ್ಯ ಕ್ಷೇತ್ರಕ್ಕೆ ಸುಮಲತಾ ಅವರ ಕೊಡುಗೆ ಏನು ಎಂದು ಪ್ರಶ್ನಿಸಿದ್ದಾರೆ.
ಆಕೆಯ ಪತಿ ಅಂಬರೀಷ್ ಅವರ ನಿಧನದಿಂದ ಅನುಕಂಪದ ಅಲೆಯ ಲಾಭ ಪಡೆಯಲು ಅವರು ಯತ್ನಿಸುತ್ತಿದ್ದಾರೆ.ಇದೊಂದು ಭಾವನಾತ್ಮಕ ವಿಷಯ ಎಂದು ತಿಳಿಸಿದ್ದಾರೆ.
ಆದರೆ ಅಂಬರೀಷ್ ಅಭಿಮಾನಿಗಳು ಮಾತ್ರ ಸುಮಲತಾ ಅವರನ್ನೆ ಕಣಕ್ಕಿಳಿಸಬೇಕೆಂದು ಎಲ್ಲಾ ರೀತಿಯ ಸಿದ್ಧತೆ ನಡೆಸುತ್ತಿದ್ದಾರೆ, ಎಲ್ಲವನ್ನೂ ತಾಳ್ಮೆಯಿಂದ ವೀಕ್ಷಿಸುತ್ತಿರುವ ಸುಮಲತಾ ಸಕ್ರಿಯ ರಾಜಕೀಯಕ್ಕೆ ಬರುವ ಕುರಿತು ಯೋಚಿಸುತ್ತಿದ್ದಾರೆ.ಈಗಾಗಲೇ ಅಂಬರೀಶ್ ಅಭಿಮಾನಿಗಳು ಸುಮಲತಾ ರಂಗಪ್ರವೇಶಕ್ಕೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ.
ಮಂಡ್ಯ ಜಿಲ್ಲೆಯ 1,030 ಗ್ರಾಮಗಳ ಪೈಕಿ 916 ಗ್ರಾಮಗಳಲ್ಲಿ ಅಂಬರೀಷ್ ಅಭಿಮಾನಿ ಸಂಘಗಳಿವೆ, ಯಾವುದೇ ಪಕ್ಷದಿಂದ ಸ್ಪರ್ದಿಸಿದರೂ ಸುಮಲತಾ ಅವರಿಗೆ ನಾವು ಬೆಂಬಲ ನೀಡುತ್ತೇವೆ. ಅವರು ಸ್ವತಂತ್ರ್ಯವಾಗಿ ಸ್ಪರ್ಧಿಸಿದರೂ ಅವರ ಪರವಾಗಿ ನಾವು ಕೆಲಸ ಮಾಡುತ್ತೇವೆ, ಅಂಬರೀಶ್ ಅವರ ಮಂಡ್ಯದ ಕನಸು ನನಸಾಗಬೇಕೆಂಬುದು ನಮ್ಮ ಆಶಯ ಅಭಿಮಾನಿಗಳು ಎಂದು ಹೇಳುತ್ತಿದ್ದಾರೆ.
ಅಂಬರೀಷ್ ಅವರ ಕುಟುಂಬಕ್ಕೂ ಮಂಡ್ಯಕ್ಕೂ ಅವಿನಾಭಾವ ಸಂಬಂಧವಿದೆ, ಅದನ್ನು ಮುಂದಿನ ದಿನಗಳಲ್ಲಿ ಸಾಬೀತು ಪಡಿಸಲಿದ್ದೇವೆ ಎಂದು ಕರ್ನಾಟಕ ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸೋಮಶೇಖರ್ ಹೇಳಿದ್ದಾರೆ.
ಈ ನಡುವೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಸುಮಲತಾ ಅವರನ್ನು ಓಲೈಸಲು ಮುಂದಾಗಿವೆ, ಅಂಬರೀಷ್ ಅಭಿಮಾನಿಗಳು ಬಿಜೆಪಿಯಿಂದ ಸ್ಪರ್ದಿಸುವಂತೆ ಒತ್ತಾಯಿಸುತ್ತಿದ್ದಾರೆ, ಸುಮಲತಾ ಅವರಿಗೆ ಟಿಕೆಟ್ ನೀಡುವ ಮೂಲಕ ಜೆಡಿಎಸ್ ಗೆ ಪ್ರತ್ಯುತ್ತರ ನೀಡಲು ಹವಣಿಸುತ್ತಿದೆ.