ರಾಜ್ಯ ಬಜೆಟ್​ಗೆ 2 ದಿನ ಬಾಕಿ; ಆಪರೇಷನ್ ಭೀತಿ ನಡುವೆ ಇಂದಿನಿಂದ ಅಧಿವೇಶನ

ಬೆಂಗಳೂರು: ರಾಜ್ಯ ಬಜೆಟ್ ಮಂಡನೆಗೆ ಇನ್ನೆರಡೇ ದಿನ ಬಾಕಿ ಇದೆ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಮಂಡಿಸುವ ಬಜೆಟ್ ಮೇಲೆ ಜನಸಾಮಾನ್ಯರಿಂದ ಸಾಕಷ್ಟು ನಿರೀಕ್ಷೆಗಳಿವೆ. ಸಮ್ಮಿಶ್ರ ಸರಕಾರಕ್ಕೆ ಇದು ಒಂದು ಒತ್ತಡವಾದರೆ, ಆಪರೇಷನ್ ಕಮಲದ ಭೀತಿ ನಿರಂತರವಾಗಿದ್ದು, ನಾಪತ್ತೆಯಾಗಿರುವ ಕೆಲ ಕೈ ಶಾಸಕರು ಅಧಿವೇಶನಕ್ಕೆ ಬರದೇ ಹೋದರೆ ಏನು ಮಾಡುವುದು ಎಂಬುದು ಮತ್ತೊಂದು ಒತ್ತಡವಾಗಿದೆ. ಈ ಎಲ್ಲಾ ಟೆನ್ಷನ್​ಗಳ ಮಧ್ಯೆ ಇವತ್ತು ಪ್ರಾರಂಭವಾಗುತ್ತಿರುವ ಈ ಜಂಟಿ ಅಧಿವೇಶನವು 8 ಕಾಲ(ಫೆ. 15ರವರೆಗೆ) ನಡೆಯಲಿದೆ. ಶುಕ್ರವಾರ ಕುಮಾರಸ್ವಾಮಿ ಅವರು ಸಮ್ಮಿಶ್ರ ಸರಕಾರದ 2ನೇ ಬಜೆಟ್ ಮಂಡಿಸಲಿದ್ದಾರೆ.

ಮೊನ್ನೆಯಿಂದಲೂ ಆಪರೇಷನ್ ಕಮಲದ ಮತ್ತೊಂದು ಅವತರಣಿಕೆ ತಲೆ ಎತ್ತಿದೆ. ನಾಲ್ವರು ಅತೃಪ್ತ ಶಾಸಕರು ಯಾರ ಕೈಗೂ ಸಿಗದೆ ನಾಟ್ ರೀಚಬಲ್ ಆಗಿ ಮುಂದುವರಿದಿರುವುದು ಮೈತ್ರಿ ಸರಕಾರಕ್ಕೆ ನುಂಗಲಾರದ ತುತ್ತಾಗಿದೆ. ಎಲ್ಲರೂ ಸಂಪರ್ಕದಲ್ಲಿದ್ಧಾರೆ. ಯಾರೂ ಎಲ್ಲೂ ಹೋಗಿಲ್ಲ ಎಂದು ಮೈತ್ರಿ ಸೂತ್ರಧಾರರು ಆತ್ಮವಿಶ್ವಾಸದಿಂದ ಹೇಳುತ್ತಿದ್ದರು ಕೆಲ ಅತೃಪ್ತರು ಪಕ್ಷದ ಸಭೆಗಳಿಗೆ ಹಾಜರಾಗುವ ಗೋಜಿಗೇ ಹೋಗಿಲ್ಲ. ನಿನ್ನೆ ನಡೆದ ಸಚಿವರ ಡಿನ್ನರ್ ಪಾರ್ಟಿಯಲ್ಲೂ ಇದೇ ಆಪರೇಷನ್ ಕಳವಳ ತುಂಬಿತ್ತು.

ಇತ್ತೀಚೆಗೆ ಕರೆಯಲಾಗಿದ್ದ ಶಾಸಕಾಂಗ ಪಕ್ಷದ ಸಭೆಗೆ ನಾಲ್ವರು ಅತೃಪ್ತರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಉಮೇಶ್ ಜಾಧವ್ ಮತ್ತು ಬಿ. ನಾಗೇಂದ್ರ ಅವರಿಗೆ ಮೂರನೇ ಬಾರಿ ನೋಟೀಸ್ ಜಾರಿ ಮಾಡಲಾಗಿದೆ. ಸಭೆಗೆ ಯಾಕೆ ಹಾಜರಾಗಿಲ್ಲವೆಂದು ವಿವರಣೆ ಕೊಡಬೇಕೆಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆದೇಶ ನೀಡಿದ್ದಾರೆ.

ಇವತ್ತು ಪ್ರಾರಂಭವಾಗುವ ಜಂಟಿ ಅಧಿವೇಶನದಲ್ಲಿ ಈ ನಾಲ್ವರು ಅತೃಪ್ತ ಶಾಸಕರು ಆಗಮಿಸುತ್ತಾರಾ ಇಲ್ಲವಾ ಎಂಬ ಕುತೂಹಲ ಎಲ್ಲರಲ್ಲೂ ಇದೆ.
ಇದೇ ವೇಳೆ, ಇವತ್ತು ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಮೈತ್ರಿಪಕ್ಷಗಳಿಗಾಗಿ ಜಂಟಿ ಶಾಸಕಾಂಗ ಸಭೆ ಕರೆದಿದ್ದಾರೆ. ಬೆಳಗಾವಿ ಅಧಿವೇಶನದ ಸಂದರ್ಭದಲ್ಲೇ ನಡೆಯಬೇಕಿದ್ದ ಈ ಸಭೆ ಬೇರೆ ಬೇರೆ ಕಾರಣಕ್ಕೆ ಕಾರ್ಯಗತವಾಗಲಿಲ್ಲ. ಔತಣಕೂಟದ ನೆಪದಲ್ಲಿ ಇವತ್ತು ನಡೆಯುವ ಈ ಜಂಟಿ ಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ, ಮಾಜಿ ಸಿಎಂ ಸಿದ್ದರಾಮಯ್ಯ ಅವರೂ ಪಾಲ್ಗೊಳ್ಳಲಿದ್ದಾರೆ.

ವಿಧಾನಸೌಧ ಬಳಿ ಬಿಗಿ ಬಂದೋಬಸ್ತ್:
ಇನ್ನು, ಇವತ್ತು ಬಜೆಟ್ ಅಧಿವೇಶನ ಹಿನ್ನೆಲೆಯಲ್ಲಿ ವಿಧಾನಸೌಧ ಸುತ್ತಮುತ್ತ ಬಿಗಿಬಂದೋಬಸ್ತ್ ಏರ್ಪಡಿಸಲಾಗಿದೆ. ಮೆರವಣಿಗೆ, ಪ್ರತಿಭಟನೆ, ಧರಣಿ ಸತ್ಯಾಗ್ರಹ, ವಿಧಾನಸೌಧಕ್ಕೆ ಮುತ್ತಿಗೆ ಇತ್ಯಾದಿ ಗಲಭೆಗಳು ನಡೆಯುವ ಸಾಧ್ಯತೆ ಇರುವುದರಿಂದ ಯಾವುದೇ ಅಡಚಣೆ ಉಂಟಾಗದಂತೆ ಪೊಲೀಸರು ಪ್ರತಿಬಂಧಕಾಜ್ಞೆ ಜಾರಿ ಮಾಡಿದ್ದಾರೆ. ವಿಧಾನಸೌಧ ಸುತ್ತ ಐದಕ್ಕೂ ಹೆಚ್ಚು ಜನರು ಸೇರುವಂತಿಲ್ಲ. ಸಭೆ, ಸಮಾರಂಭಗಳನ್ನ ನಡೆಸುವ ಹಾಗಿಲ್ಲ. ವಿಧಾನಸೌಧ ಸುತ್ತಮುತ್ತ ಶಸ್ತ್ರಾಸ್ತ್ರ, ದೊಣ್ಣೆ, ಕತ್ತಿ, ಈಟಿ, ಗದೆ, ಕಲ್ಲು, ಇಟ್ಟಿಗೆ, ಚಾಕು ಮುಂತಾದ ವಸ್ತುಗಳನ್ನ ಇಟ್ಟುಕೊಳ್ಳುವಂತಿಲ್ಲ. ಯಾವುದೇ ವ್ಯಕ್ತಿಗಳ ಮತ್ತು ಶವಗಳ ಪ್ರತಿಕೃತಿ ದಹನ ಮಾಡುವ ಹಾಗಿಲ್ಲ.

ವಿಧಾನಸೌಧದಲ್ಲಿ ಮಾಧ್ಯಮಗಳಿಗೂ ಪೊಲೀಸರು ನಿರ್ಬಂಧ ಹಾಕಿದ್ದಾರೆ. ಮಾಧ್ಯಮಗಳಿಗೆ ಪಾಸ್ ವ್ಯವಸ್ಥೆ ಇದ್ದರೂ ಬ್ಯಾರಿಕೇಡ್ ಹಾಕಿ ವಾಹನ ತಡೆಯಲಾಗುತ್ತಿದೆ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ