ಅರ್ಹತೆ ಆಧಾರದ ವಲಸೆಗೆ ಪ್ರಥಮ ಆದ್ಯತೆ: ಅಮೆರಿಕಾ ಅಧ್ಯಕ್ಷ ಟ್ರಂಪ್ ಪುನರುಚ್ಚಾರ

ವಾಷಿಂಗ್ಟನ್, ಫೆ.6- ಅರ್ಹತೆ ಆಧಾರದ ವಲಸೆಗೆ ಪ್ರಥಮ ಆದ್ಯತೆ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.

ಈ ಮೂಲಕ ಭಾರತದ ಪ್ರತಿಭಾವಂತ ವಿದ್ಯಾರ್ಥಿಗಳು ಮತ್ತು ಉದ್ಯೋಗಿಗಳ ಭವಿಷ್ಯದಲ್ಲಿ ಭರವಸೆಯ ಆಶಾಭಾವನೆ ಮೂಡಿದೆ. ಅಮೆರಿಕ ಜಂಟಿ ಕಾಂಗ್ರೆಸ್ ಅಧಿವೇಶನದಲ್ಲಿ ಮಾತನಾಡಿದ ಟ್ರಂಪ್, ಮೆಕ್ಸಿಕೋ ಗಡಿಯಿಂದ ಅಕ್ರಮ ವಲಸೆ ತಡೆಗಟ್ಟಲು ಗಡಿಭಾಗದಲ್ಲಿ ಗೋಡೆ ನಿರ್ಮಿಸುವ ತಮ್ಮ ನಿರ್ಧಾರವನ್ನು ಮತ್ತೊಮ್ಮೆ ಸಮರ್ಥಿಸಿಕೊಂಡರು.

ಅಕ್ರಮ ವಲಸೆ ತಡೆಗಟ್ಟಿದರೆ ಅಮೆರಿಕದಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗುತ್ತದೆ. ಇದೇ ವೇಳೆ ತಾವು ಪ್ರತಿಭೆ ಮತ್ತು ಅರ್ಹತೆ ಇರುವ ಅನ್ಯ ದೇಶದವರನ್ನು ಇಲ್ಲಿಗೆ ವಲಸೆ ಬರಲು ಆಹ್ವಾನಿಸುತ್ತೇವೆ ಎಂದು ಹೇಳಿದರು.

ತಮ್ಮ ಭಾಷಣದಲ್ಲಿ ವಿವಿಧ ವಿಷಯಗಳನ್ನು ಪ್ರಸ್ತಾಪಿಸಿದ ಟ್ರಂಪ್, ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಬಂಡುಕೋರರ ಜತೆ ಶಾಂತಿಸಂಧಾನ ಮಾತುಕತೆ ಫಲಪ್ರದವಾಗುವ ನಿಟ್ಟಿನಲ್ಲಿ ಸಾಗಿದೆ ಎಂದರು.

ಉತ್ತರ ಕೊರಿಯಾದಲ್ಲಿ ಅಣ್ವಸ್ತ್ರ ನಿಶ್ಶಸ್ತ್ರೀಕರಣಕ್ಕಾಗಿ ಆ ದೇಶದ ನಾಯಕ ಕಿಮ್ ಅವರೊಂದಿಗೆ ಫೆ.27 ಮತ್ತು 28ರಂದು ವಿಯೆಟ್ನಾಂನಲ್ಲಿ ಎರಡನೆ ಸುತ್ತಿನ ಮಾತುಕತೆ ನಡೆಸುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ