ಡಾ.ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತ ರತ್ನ ನೀಡಬೇಕು: ಡಿಸಿಎಂ.ಪರಮೇಶ್ವರ್

ಬೆಂಗಳೂರು, ಫೆ.6- ಸಿದ್ಧಗಂಗಾಮಠದ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ಮನವಿ ಮಾಡಿದರು.

ವಿಧಾನಸೌಧದಲ್ಲಿ ಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಮಂಡಿಸಿದ್ದ ಸಂತಾಪ ಸೂಚಕ ನಿರ್ಣಯ ಬೆಂಬಲಿಸಿ ಮಾತನಾಡಿದ ಅವರು, ದೇಶದಲ್ಲಿ ಇದುವರೆಗೂ 44 ಮಂದಿ ಗಣ್ಯರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ.

ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ನೀಡಲಾಗಲಿಲ್ಲ ಎಂಬ ನೋವಿದೆ.ಈ ಸದನದ ಮೂಲಕ ಕೇಂದ್ರ ಸರ್ಕಾರ ಹಾಗೂ ರಾಷ್ಟ್ರಪತಿಗಳಿಗೆ ಮನವಿ ಮಾಡಿ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಕೋರುತ್ತೇನೆ ಎಂದಾಗ, ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರು ಮೇಜು ಕುಟ್ಟಿ ಸ್ವಾಗತಿಸಿದರು.

ಚಿಕ್ಕಂದಿನಿಂದಲೂ ನಾನು ಶ್ರೀಗಳ ನೆರಳಲ್ಲಿ ಬೆಳೆದಿದ್ದೇನೆ. ನನಗೆ ಐದು ವರ್ಷವಾಗಿದ್ದಾಗ ನನ್ನ ತಲೆ ಮೇಲೆ ಕೈಯಿಟ್ಟು ಒಳ್ಳೆಯದಾಗಲಿ ಎಂದು ಆಶೀರ್ವದಿಸಿದ್ದರು. ಅವರ ಆಶೀರ್ವಾದದಿಂದಲೇ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಕಟ್ಟಲಾಯಿತು.ಶ್ರೀಗಳು ಮಾಡಿರುವ ತ್ಯಾಗ, ಸಮಾಜಕ್ಕೆ ಕೊಟ್ಟಿರುವ ಕೊಡುಗೆ ಅಪಾರ ಎಂದರು.

ಕೇಂದ್ರದ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್ ಅವರು ಒಬ್ಬ ಕನ್ನಡಿಗರಾಗಿ ಅನೇಕ ವರ್ಗದ ಧ್ವನಿಯಾಗಿದ್ದರು.ಸರಳ ಜೀವನ ನಡೆಸಿದ ಅತ್ಯಂತ ಆದರ್ಶ ರಾಜಕಾರಣಿಯಾಗಿದ್ದರು ಎಂದು ಸ್ಮರಿಸಿದರು.

ವಿಧಾನಸಭಾ ಮಾಜಿ ಸದಸ್ಯ ದತ್ತು ಯಲ್ಲಪ್ಪ ಹಕ್ಯಾಗೋಳ್ ಮತ್ತು ಸಾಲೇರ್ ಸಿದ್ದಪ್ಪ ಅವರ ನಿಧನಕ್ಕೂ ಸಂತಾಪ ಸೂಚಿಸಲಾಯಿತು.

ಸಂತಾಪ ಸೂಚಕ ನಿರ್ಣಯ ಬೆಂಬಲಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಿದ್ಧಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರಶಸ್ತಿ ನೀಡಬೇಕೆಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ