ಸಮ್ಮಿಶ್ರ ಸರ್ಕಾರ ಉರುಳುತ್ತಾ? ಉಳಿಯುತ್ತಾ? ಇಂದು ವಿಧಾನಸಭೆಯಲ್ಲಿ ಏನಾಗಬಹುದು?

ಬೆಂಗಳೂರು: ಕುಮಾರಣ್ಣನ ಸರ್ಜಿಕಲ್ ಸ್ಟ್ರೈಕೋ? ಯಡಿಯೂರಪ್ಪ ಅವರ ಲೋಟಸ್ ರಾಕೆಟ್ಟೋ? ಸಿದ್ದರಾಮಯ್ಯ ಅವರ ಕೈ ಕಾದಾಟವೋ? ಈ ಕುತೂಹಲ ಪ್ರಶ್ನೆಗಳಿಗೆ ಇಂದು ಉತ್ತರ ಸಿಗಲಿದೆ.

ಇಂದಿನಿಂದ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಬೆಳಗ್ಗೆ 11 ಗಂಟೆಗೆ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಯಾವುದೇ ಅಡೆತಡೆ ಇಲ್ಲದೆ ರಾಜ್ಯಪಾಲರ ಭಾಷಣ ನಡೆಯುವ ಸಾಧ್ಯತೆ ಹೆಚ್ಚಿದೆ.

ಈ ವೇಳೆ ಕಾಂಗ್ರೆಸ್‍ನ ಕೆಲವು ಅತೃಪ್ತ ಶಾಸಕರು ಗೈರಾಗುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ. ಆದರೆ ಗೈರಾಗುವ ಶಾಸಕರ ಸಂಖ್ಯೆ 4, 6, 8 ಅದಕ್ಕಿಂತ ಹೆಚ್ಚೋ ಎನ್ನುವುದಕ್ಕೆ ಉತ್ತರ ಇವತ್ತು ಸಿಗಲಿದೆ. ಇನ್ನೊಂದೆಡೆ ಈ ಗೈರು ಹಾಜರಾತಿ ಮೇಲೆ ಆಟವಾಡಲು ಬಿಜೆಪಿ ಕೂಡ ಹೊಂಚು ಹಾಕಿ ಕುಳಿತ್ತಿದ್ದು, ಗುರಿ ಒಂದೇ ದಾರಿ ಬೇರೆ ಬೇರೆ ಎನ್ನುವ ತಂತ್ರಗಾರಿಕೆಗಳನ್ನು ಮಾಡಿಕೊಂಡಿದೆ.

ಈ ಕಾರಣಕ್ಕಾಗಿಯೇ ಇವತ್ತಿನ ಜಂಟಿ ಅಧಿವೇಶನ, ಬಜೆಟ್ ಅಧಿವೇಶನ ಕುತೂಹಲ ಮೂಡಿಸಿದ್ದು, ಬಿಜೆಪಿ ನಾಯಕರ ನಡೆ ನಿಗೂಢತೆ ಉಳಿಸಿದೆ. ಅಷ್ಟೇ ಅಲ್ಲದೇ ದೋಸ್ತಿ ಸರ್ಕಾರದ ಘಟಾನುಘಟಿ ನಾಯಕರ ಪಾನ್ ಮೂವ್ ಮಾಡುವ ಬಗ್ಗೆಯೂ ಕುತೂಹಲ ಮೂಡಿಸಿದ್ದು, ಇವತ್ತು ಏನಾಗುತ್ತೆ ಕಾದುನೋಡಬೇಕಿದೆ.

ಇವತ್ತು ವಿಧಾನಸಭೆಯಲ್ಲಿ ಏನಾಗಬಹುದು?
ರಾಜ್ಯಪಾಲರ ಭಾಷಣಕ್ಕೆ ಮೊದಲು ಬಿಜೆಪಿ ಅನುವು ಮಾಡಿಕೊಡಬಹುದು. ಒಂದು ವೇಳೆ ಕೈ ಅತೃಪ್ತರು ಗೈರಾದ್ರೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಬಹುದು. ರಾಜ್ಯಪಾಲರ ಭಾಷಣದ ಕೆಲವು ಅಂಶಗಳಿಗೆ ವಿರೋಧ ವ್ಯಕ್ತಪಡಿಸಬಹುದು. ಮೇಲಿನ ಎರಡು ಅಂಶಗಳನ್ನ ಮುಂದಿಟ್ಟುಕೊಂಡು ಗಲಾಟೆ ಎಬ್ಬಿಸಬಹುದು. ರಾಜ್ಯಪಾಲರ ಭಾಷಣಕ್ಕೆ ತಡೆಯೊಡ್ಡದೆ, ಮುಗಿದ ಬಳಿಕ ಅತೃಪ್ತರಿಂದ ರಾಜೀನಾಮೆ ಕೊಡಿಸಬಹುದು. ಇವತ್ತು ಸುಮ್ಮನಿದ್ದು, ಫೆ.7 ರಿಂದ ಅಸಲಿ ಆಟ ಶುರು ಮಾಡುವುದು.

ಇವತ್ತು ರಾಜ್ಯಪಾಲರು ಏನು ಮಾಡಬಹುದು..? 
ರಾಜ್ಯಪಾಲರ ಷೆಡ್ಯೂಲ್‍ನಂತೆ ಜಂಟಿ ಅಧಿವೇಶನವನ್ನುದ್ದೇಶಿಸಿ ಭಾಷಣ ಮಾಡುವ ವೇಳೆ ಬಿಜೆಪಿ ದೊಡ್ಡ ಮಟ್ಟದಲ್ಲಿ ಅಡ್ಡಿಪಡಿಸಿದರೆ ಮೊಟಕುಗೊಳಿಸಿ ಹೊರಡುವುದು. ಭಾಷಣವನ್ನು ಮಂಡಿಸಿ ಜಂಟಿ ಅಧಿವೇಶನದಿಂದ ತೆರಳಬಹುದು. ಬಳಿಕ ಗಲಾಟೆ ಬಗ್ಗೆ ಸಿಎಂ ಕುಮಾಸ್ವಾಮಿ ಅವರಿಂದ ವಿವರಣೆ ಪಡೆಯಬಹುದು. ಅತೃಪ್ತರು ರಾಜೀನಾಮೆ ನೀಡಿದರೆ ಆ ಬಗ್ಗೆಯೂ ವಿವರಣೆ ಪಡೆಯಬಹುದು. ರಾಜೀನಾಮೆ ಅಂಗೀಕಾರಕ್ಕೆ ಸ್ಪೀಕರ್ ಅವರಿಂದ ವಿವರಣೆ ಪಡೆಯಬಹುದು.

ಫೆ. 15ರವರೆಗೆ ವಿಪ್ ಜಾರಿ:
ಕಾಂಗ್ರೆಸ್‍ನ ಎಲ್ಲಾ ಶಾಸಕರಿಗೆ ಸಿದ್ದರಾಮಯ್ಯ ವಿಪ್ ಜಾರಿ ಮಾಡಿದ್ದಾರೆ. ಇಂದಿನಿಂದ ಫೆ.15ರವರೆಗೂ ಕಡ್ಡಾಯವಾಗಿ ಅಧಿವೇಶನಕ್ಕೆ ಹಾಜರಾಗುವಂತೆ ವಿಪ್ ಜಾರಿ ಮಾಡಿದ್ದು, ಒಂದೇ ಒಂದು ದಿನ ಶಾಸಕರು ಗೈರಾದ್ರೆ ಅನರ್ಹತೆಗೆ ಶಿಫಾರಸು ಮಾಡಲಾಗುತ್ತದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ