ನಗರದಲ್ಲಿ ಉಲ್ಬಣಗೊಂಡಿರುವ ಕಸದ ಸಮಸ್ಯೆ

ಬೆಂಗಳೂರು,ಫೆ.6- ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಸ ಸಮಸ್ಯೆ ಉಲ್ಬಣಗೊಂಡಿದ್ದು, ಬಿಬಿಎಂಪಿ ಪಾಲಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ಒಂದೆಡೆ ಕಸ ವಿಲೇವಾರಿ ಜಾಗದ ಸಮಸ್ಯೆ ಆಗಾಗ್ಗೆ ತಲೆದೋರುತ್ತಿದ್ದರೆ ಮತ್ತೊಂದೆಡೆ ಸಮಪರ್ಕವಾಗಿ ಕಸ ವಿಂಗಡಣೆಯಾಗದೆ ಸಮಸ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.

ಮೂಲದಲ್ಲೇ ಕಸ ವಿಂಗಡಣೆ ಮಾಡುವಂತೆ ಬಿಬಿಎಂಪಿ ಮತ್ತು ಸರ್ಕಾರ ಸಾಕಷ್ಟು ಬಾರಿ ಮನವಿ ಮಾಡುತ್ತಿದ್ದರೂ ಸಾರ್ವಜನಿಕರು ಮಾತ್ರ ಜಾಣ ಕಿವುಡು ಪ್ರದರ್ಶಿಸುತ್ತಿದ್ದಾರೆ.

ಹಸಿ ಮತ್ತು ಒಣ ತ್ಯಾಜ್ಯಗಳನ್ನು ಮೂಲದಲ್ಲೇ ವಿಂಗಡಿಸುವಂತೆ ಬೆಂಗಳೂರು ನಾಗರೀಕರಲ್ಲಿ ಸಾಕಷ್ಟು ಬಾರಿ ಬಿಬಿಎಂಪಿ ಮನವಿ ಮಾಡುತ್ತಲೇ ಇದೆ. ಆದರೆ ಇದುವರೆಗೂ ಈ ಕಾರ್ಯ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿಲ್ಲ.

ಹೀಗಾಗಿ ಸಾರ್ವಜನಿಕರಿಗೆ ಕಸ ವಿಂಗಡಣೆ ಕುರಿತು ಪರಿಣಾಮಕಾರಿ ಜಾಗೃತಿ ಮೂಡಿಸುವುದರಿಂದ ಕಸ ಸಮಸ್ಯೆ ತಗ್ಗಬಹುದು. ಹೀಗೆಂದೇ ಚಲನಚಿತ್ರ ನಿರ್ದೇಶಕ, ನಟ ಎಸ್.ನಾರಾಯಣ್ ಬೀದಿ ನಾಟಕದ ಮೂಲಕ ಕಸ ವಿಂಗಡಣೆ ಕುರಿತು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ತಮ್ಮದೇ ಚಲನಚಿತ್ರ ನಟನಾ ಶಾಲೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ತಂಡದೊಂದಿಗೆ ನಾಳೆ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬೀದಿ ನಾಟಕ ಪ್ರದರ್ಶಿಸಲಿದ್ದಾರೆ.

ಇಂತಹದ್ದೊಂದು ಪ್ರಯೋಗ ಬಿಬಿಎಂಪಿಗೆ ಇಷ್ಟವಾಗಿ ಅನುಮತಿ ನೀಡಿದರೆ ನಗರದ ಮೂಲೆ ಮೂಲೆಗಳಲ್ಲೂ ಬೀದಿ ನಾಟಕದ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ತಿಳಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ