ನಾಳೆ ರಾಜ್ಯಪಾಲರ ಭಾಷಣಕ್ಕೆ ಅತೃಪ್ತ ಶಾಸಕರ ಗೈರು? ಭಾಷಣಕ್ಕೆ ಅಡ್ಡಿಪಡಿಸಲು ಮುಂದಾಗಿರುವ ಬಿಜೆಪಿ

ಬೆಂಗಳೂರು, ಫೆ.5- ನಾಳೆಯಿಂದ ಆರಂಭವಾಗಲಿರುವ ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್‍ನ ಅತೃಪ್ತ ಶಾಸಕರು ಸದನಕ್ಕೆ ಗೈರುಹಾಜರಾದರೆ ಭಾಷಣಕ್ಕೆ ಅಡ್ಡಿಪಡಿಸಲು ಬಿಜೆಪಿ ಮುಂದಾಗಿದೆ.

ಈ ಸಂಬಂಧ ಇಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ನಿವಾಸದಲ್ಲಿಂದು ಕೆಲವು ಆಪ್ತ ಮುಖಂಡರ ಜತೆ ಗುಪ್ತ ಸಮಾಲೋಚನೆ ನಡೆಸಿರುವ ಅವರು, ಅತೃಪ್ತರು ಬಾರದಿದ್ದರೆ ಭಾಷಣಕ್ಕೆ ಅಡ್ಡಿಪಡಿಸುವಂತೆ ಸೂಚಿಸಿದ್ದಾರೆ.

ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಕಾರಣಕ್ಕಾಗಿಯೇ ಶಾಸಕರು ಗೈರು ಹಾಜರಾಗಿದ್ದಾರೆ.ಇದನ್ನೇ ಅಸ್ತ್ರವಾಗಿಟ್ಟುಕೊಂಡು ಬಿಜೆಪಿ ರಾಜ್ಯಪಾಲರ ಭಾಷಣಕ್ಕೆ ಅಡ್ಡಿಪಡಿಸುವ ಮೂಲಕ ಸರ್ಕಾರದ ಹುಳುಕನ್ನು ಅವರ ಗಮನಕ್ಕೆ ತರಲು ಮುಂದಾಗಿದೆ.

ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮುಟಳ್ಳಿ, ಬಿ.ನಾಗೇಂದ್ರ ಮತ್ತು ಡಾ.ಉಮೇಶ್ ಜಾದವ್ ಕಳೆದ 20 ದಿನಗಳಿಂದ ಅಜ್ಞಾತ ಸ್ಥಳದಲ್ಲಿದ್ದಾರೆ. ನಾಳೆ ವಿಧಾನಮಂಡಲದ ಜಂಟಿ ಅಧಿವೇಶನ ಆರಂಭವಾಗಲಿದೆ.ಮೊದಲು ರಾಜ್ಯಪಾಲರು ಉಭಯ ಸದನಗಳನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.ನಂತರ ಶುಕ್ರವಾರ ಹಣಕಾಸು ಖಾತೆ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಸಕ್ತ ಸಾಲಿನ ಬಜೆಟ್ ಮಂಡಿಸಲಿದ್ದಾರೆ.

ಒಂದು ವೇಳೆ ಅತೃಪ್ತ ಶಾಸಕರು ನಾಳಿನ ಬಜೆಟ್‍ಗೂ ಬಾರದೆ ಗೈರುಹಾಜರಾದರೆ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಋಜುವಾತಾಗುತ್ತದೆ. ಪ್ರತಿಪಕ್ಷಗಳಿಗೆ ಇದುವೇ ಅಸ್ತ್ರವಾಗಲಿದ್ದು, ಸರ್ಕಾರದ ವಿರುದ್ಧ ಮುಗಿಬೀಳಲು ಕಾರಣವೊಂದು ಸಿಗುತ್ತದೆ.

ಎಷ್ಟು ಶಾಸಕರು ಸದನಕ್ಕೆ ಬರುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಂತರ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಜ್ಜಾಗಬೇಕು.ಈಗಿರುವ ಅವಕಾಶವನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು.ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಎಲ್ಲರೂ ಸದನಕ್ಕೆ ಕಡ್ಡಾಯವಾಗಿ ಹಾಜರಾಗುವಂತೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ