ಬೆಂಗಳೂರು, ಫೆ.5- ಆಪರೇಷನ್ ಕಮಲ ಶತಾಯಗತಾಯ ಮಾಡಿ ಮುಗಿಸುವ ಉತ್ಸಾಹದಲ್ಲಿರುವ ಬಿಜೆಪಿ ನಾಯಕರನ್ನು ಲೋಕಸಭೆ ಚುನಾವಣೆಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಬಲವಂತ ಪ್ರಯತ್ನದತ್ತ ಹೈಕಮಾಂಡ್ ಮುಂದಾಗಿದೆ.
ಇಂದು ಸಂಜೆಯ ನಂತರ ಬಿಜೆಪಿಯಲ್ಲಿ ಸಂಘಟನಾತ್ಮಕ ಚಟುವಟಿಕೆ ಸಂಬಂಧ ಎರಡು ಮಹತ್ವದ ಕಾರ್ಯಕ್ರಮಗಳು ನಡೆಯಲಿವೆ. ಲೋಕಸಭೆ ಚುನಾವಣೆ ಹಾಗೂ ಅದರಲ್ಲಿ ಕರ್ನಾಟಕದಿಂದ ಹೆಚ್ಚು ಸ್ಥಾನ ಗಳಿಸುವ ನಿಟ್ಟಿನಲ್ಲಿ ರಾಜ್ಯ ಬಿಜೆಪಿ ನಾಯಕರಲ್ಲಿ ಉತ್ಸಾಹ, ಚುರುಕು ಮುಟ್ಟಿಸಲು ಈ ಎರಡು ಕಾರ್ಯಕ್ರಮಗಳು ಒಂದರ ನಂತರ ಇನ್ನೊಂದು ನಡೆಯಲಿದೆ.
ಭಾರತ್ ಕೆ ಮನ್ ಕಿ ಬಾತ್ ಮೋದಿ ಕೆ ಸಾಥ್ ಹೆಸರಿನಲ್ಲಿ ಲೋಕಸಭೆ ಚುನಾವಣೆಗೆ ಸಿದ್ಧತೆ ಆರಂಭಿಸುವ ಮಹತ್ವದ ಕಾರ್ಯಕ್ರಮ ಸಂಜೆ 4.30ಕ್ಕೆ ಬಿಜೆಪಿ ಕಚೇರಿಯಲ್ಲಿ ನಡೆಯಲಿದೆ.ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ಮಹತ್ವದ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ.
ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಸಮಾರಂಭ ನಡೆಯಲಿದೆ.ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪಿ.ಮುರಳೀಧರ್ ರಾವ್, ಸಹ ಉಸ್ತುವಾರಿ ಕಿರಣ್ ಮಹೇಶ್ವರಿ, ಮುಖಂಡರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಗೋವಿಂದ ಕಾರಜೋಳ ಮತ್ತು ಇತರ ನಾಯಕರು ಹಾಜರಿರುವರು.
ಬಿಜೆಪಿ ಸಂಕಲ್ಪ ಪತ್ರ (ಚುನಾವಣಾ ಪ್ರಣಾಳಿಕೆ) ಸಿದ್ಧಪಡಿಸಲು ದೇಶದ ಜನರಿಂದ ಸಲಹೆಗಳನ್ನು ಸ್ವೀಕರಿಸುವ ಭಾರತ್ ಕೆ ಮನ್ ಕಿ ಬಾತ್ ಮೋದಿ ಕೆ ಸಾಥ್ ಎಂಬ ಯೋಜನೆಯನ್ನು ಬಿಜೆಪಿ ಕೈಗೆತ್ತಿಕೊಂಡಿದೆ.ಒಂದು ತಿಂಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ಸಂಕಲ್ಪ ಪತ್ರ ತಯಾರಿಕೆಗಾಗಿ ದೇಶದ 10 ಕೋಟಿ ಜನರಿಂದ ಸಲಹೆಗಳನ್ನು ಪಡೆಯಲಾಗುವುದು.
ಮಹತ್ವದ ಕೋರ್ ಕಮಿಟಿ ಸಭೆ:
ಸಂಜೆ 6ಕ್ಕೆ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಸರ್ಕಾರದ ವೈಫಲ್ಯಗಳ ಕುರಿತು ಚರ್ಚಿಸುವ ಸಲುವಾಗಿ, ಅಧಿವೇಶನದ ಮುನ್ನಾ ದಿನ ಸಾಮಾನ್ಯವಾಗಿ ಪ್ರತಿಪಕ್ಷ ಕೋರ್ ಕಮಿಟಿ ಸಭೆ ಸೇರುವುದು ವಾಡಿಕೆ. ಅದೇ ಪ್ರಕಾರ ಈ ಸಭೆ ನಡೆಯುತ್ತಿದೆ ಎನ್ನಲಾಗಿದೆ.ಆದರೆ ಆಪರೇಷನ್ ಕಮಲ ವಿಚಾರದಲ್ಲಿಯೇ ಸಾಕಷ್ಟು ಮುಳುಗಿಹೋಗಿರುವ ರಾಜ್ಯ ಬಿಜೆಪಿ ನಾಯರನ್ನು ಮುಂದಿನ ಲೋಕಸಭೆಗೆ ಸಜ್ಜಾಗಿ ಎಂದು ಸೂಚನೆ ನೀಡಲು ಸಭೆಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ ಎಂಬ ಮಾಹಿತಿ ಇದೆ.
ಸಭೆಗೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್ ಲಾಲ್ ಆಗಮಿಸುತ್ತಿರುವುದು ಇನ್ನೊಂದು ವಿಶೇಷ. ಕೇಂದ್ರ ಬಿಜೆಪಿ ನಾಯಕರ ಸೂಚನೆಯನ್ನು ರಾಜ್ಯ ನಾಯಕರಿಗೆ ಸೂಕ್ಷ್ಮವಾಗಿ ತಿಳಿಸಲು ಅವರು ಆಗಮಿಸುತ್ತಿದ್ದಾರೆ ಎನ್ನಲಾಗಿದೆ.
ಸಹಜವಾಗಿ ಇವರ ಭೇಟಿ ಅತ್ಯಂತ ಮಹತ್ವ ಪಡೆದುಕೊಂಡಿದೆ. ವಿಧಾನಸಭೆ ಅಧಿವೇಶನದಲ್ಲಿ ಸಮ್ಮಿಶ್ರ ಸರ್ಕಾರದ ವೈಫಲ್ಯಗಳ ಲಾಭ ಪಡೆಯಲು ಸೂಚನೆ ನೀಡಲಾಗುತ್ತದೆ. ಜತೆಗೆ ಆಪರೇಷನ್ ಕಮಲದ ಚರ್ಚೆ ಕೂಡ ಬರಲಿದೆ. ಸದ್ಯ ಮುಂದಿನ ಲೋಕಸಭೆ ಚುನಾವಣೆ ಗೆಲುವು ಪಕ್ಷಕ್ಕೆ ಅತ್ಯಂತ ಮುಖ್ಯ.ಅದನ್ನು ಮನಗಾಣಬೇಕೆಂಬ ಸೂಚನೆ ರಾಜ್ಯ ನಾಯಕರಿಗೆ ರವಾನೆಯಾಗಲಿದೆ ಎನ್ನಲಾಗಿದೆ.